ಹಾವೇರಿ: ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಬಸ್ ಪ್ರಯಾಣ ದರ ತುಂಬಾ ಕಡಿಮೆ ಇದೆ ಎಂದು ಬಸ್ ಟಿಕೆಟ್ ದರ ಏರಿಕೆಯನ್ನು ಸಚಿವ ಶಿವಾನಂದ್ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಹಾವೇರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯದ ಬಡ ಜನತೆಯ ಬೆಳವಣಿಗೆಯನ್ನು ಸಹಿಸುವುದಿಲ್ಲ. ಅವರಿಗೆ ಹೋರಾಟ ಮಾಡುವುದು ಬಿಟ್ಟರೆ ಅಭಿವೃದ್ದಿಯ ಬಗ್ಗೆ ಚರ್ಚಿಸಿ ಎಂದರೆ ಚರ್ಚೆಗೆ ಬರುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಶಕ್ತಿ ಯೋಜನೆಯಲ್ಲಿ ಹೆಣ್ಣು ಮಕ್ಕಳನ್ನು ಓಡಾಡಿಸುತ್ತಿರುವುದು ಲಾಭ-ನಷ್ಟದ ಉದ್ದೇಶವಲ್ಲ. ಹೆಣ್ಣು ಮಕ್ಕಳಿಗೆ, ಬಡವರಿಗೆ ಏನು ಕೊಡಬೇಕೋ ಅದನ್ನು ಕೊಡುವುದು ನಮ್ಮ ಉದ್ದೇಶ ಎಂದರು.
ದುಡಿಯುವ ಗಂಡು ಮಕ್ಕಳಿಗೆ 15% ಭಾರ ಆಗಬಹುದು. ಆದರೆ ಪ್ರತಿನಿತ್ಯ ಹೆಚ್ಚು ಓಡಾಡುತ್ತಿರುವುದು ಹೆಣ್ಣು ಮಕ್ಕಳು, ಗಂಡು ಮಕ್ಕಳಲ್ಲ ಎಂದರು.
ಇನ್ನು ಅಧಿಕಾರ ಹಂಚಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಿಎಂ, ಡಿಸಿಎಂ ಸೇರಿದಂತೆ ಇನ್ನಿತರ ಸ್ಥಾನಕ್ಕೆ ವರಿಷ್ಠರ ತೀರ್ಮಾನವೇ ಅಂತಿಮವಾಗಲಿದೆ. ಈ ಬಗ್ಗೆ ಸಿಎಲ್‌ಪಿ ಸಭೆಯಲ್ಲಿ ನಿರ್ಣಯವಾಗುತ್ತದೆ ಎಂದು ತಿಳಿಸಿದರು.