ಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಏಕವಚನಲ್ಲೇ ಛಾಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾನು ಈ ಕ್ಷೇತ್ರದಲ್ಲಿ ಗೆದ್ದ ಬಳಿಕ ಅವರಪ್ಪ ಬಂದು ನನ್ನನ್ನು ಬಿಜೆಪಿ ಕರೆದುಕೊಂಡು ಹೋಗುತ್ತಾನೆ. ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದರು, ಅವರ ಕೈಕಾಲನ್ನೇ ಕಟ್ಟಿ ಪಕ್ಷಕ್ಕೆ ಮತ್ತೆ ಆಹ್ವಾನಿಸಿರುವಾಗ ಮೂಲ ಬಿಜೆಪಿಯವನಾದ ನನ್ನನ್ನು ಕರೆಯುದಿಲ್ಲವೇ. ಬಿಜೆಪಿಯನ್ನು ಕಟ್ಟಿದವನು ನಾನು, ನಾನು ಬಿಜೆಪಿಯಲ್ಲಿಯೇ ಇದ್ದವನು, ಯಡಿಯೂರಪ್ಪ ಕೆಜೆಪಿ ಕಟ್ಟಿ ನಂತರ ಪಕ್ಷಕ್ಕೆ ವಾಪಾಸಾಗಿದ್ದಾನೆ ಎಂದು ಕಿಡಿಕಾರಿದರು.
ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯ ಬಿಜೆಪಿಯನ್ನು ಅಪ್ಪ-ಮಕ್ಕಳಿಂದ ಮಕ್ತ ಮಾಡುತ್ತೇನೆ. ರಾಘವೇಂದ್ರ ಸೋಲುವ ಮೂಲಕ ಆತನ ಕಥೆ ಮುಗಿದಂತೆಯೇ, ಚುನಾವಣೆ ಬಳಿಕ ಬಿ.ವೈ ವಿಜೈಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾನೆ ಎಂದು ಏಕವಚನದಲ್ಲಿಯೇ ಈಶ್ವರಪ್ಪ ಮಾತನಾಡಿದರು.
ಮುಂದುವರೆದು, ವಿಜಯೇಂದ್ರ ಕುಂಕುಮ ಅಳಿಸಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಅವರಿಗೆ ಯಾವುದೇ ನೈತಿಕತೆಯಿಲ್ಲ. ಕುಂಕುಮವನ್ನು ಯಾವಾಗ ಬೇಕಾದರೂ ಹಚ್ಚುತ್ತಾರೆ, ಯಾವಾಗ ಬೇಕಾದರೂ ತೆಗೆಯುತ್ತಾರೆ. ಕೆಜೆಪಿಯಲ್ಲಿದ್ದಾಗ ಇವರೆ ಅಲ್ಲವೇ ಟಿಪ್ಪು ಜಯಂತಿ ದಿನದಂದು, ಟಿಪ್ಪು ಟೋಪಿ ಹಾಕಿಕೊಂಡು ಹೋಗಿದ್ದವರು ಎಂದು ಆಕ್ರೋಶ ಹೊರ ಹಾಕಿದರು.