ಬೆಂಗಳೂರು: ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದ್ದು, ಚಾರ್ಜ್‌ಶೀಟ್ ಸಲ್ಲಿಸದಂತೆ ಬಾಂಬೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ಠಾಣೆಯಲ್ಲಿ ಧ್ರುವ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಧ್ರುವಸರ್ಜಾ ಮ್ಯಾನೇಜರ್, ಇದೊಂದು ಸುಳ್ಳು ಆರೋಪ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಧ್ರುವಸರ್ಜಾ ಮ್ಯಾನೇಜರ್ ಅಶ್ವಿನ್, ಧ್ರುವ ಸರ್ಜಾ ವಿರುದ್ಧ ಮೂರು ಕೋಟಿ ವಂಚನೆ ಆರೋಪ ಸುಳ್ಳು. ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ನಾವು ಸಿನಿಮಾ ಮಾಡಲು ರೆಡಿ ಇದ್ದೆವು. ಆದರೇ ಅವರೇ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂ ಹಣ ನೀಡಿದ್ದರು. ಪ್ರತಿ ಬಾರಿ ನಾವು ಕರೆ ಮಾಡಿ ಕೇಳಿದಾಗಲೂ ಅವರು ಬ್ಯುಸಿ ಇರುವುದಾಗಿ ಹೇಳುತ್ತಲೇ ಬಂದಿದ್ದಾರೆ.
ನಾಲ್ಕುವರೆ ವರ್ಷದ ಬಳಿಕ ಸಿನಿಮಾ ಸ್ಕ್ರಿಪ್ಟ್ ಮೊದಲಾರ್ಧವನ್ನು ಕಳುಹಿಸಿದರು. ಒಂದು ದಿನ ಸೋಲ್ಜರ್ ಸಿನಿಮಾ ಮಾಡುವುದಾದರೆ ಕನ್ನಡದಲ್ಲಿ ಬೇಡ. ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದು ಹೇಳಿದ್ದರು. ಇದಕ್ಕೆ ಧ್ರುವ ಸರ್ಜಾ ಒಪ್ಪಲಿಲ್ಲ. ಸಿನಿಮಾವನ್ನು ಕನ್ನಡದಲ್ಲೇ ಮಾಡೋಣ ಎಂದು ಹೇಳಿದ್ದರು.
ಕೊನೆಗೆ ಕನ್ನಡದಲ್ಲಿ ಸಿನಿಮಾ ಮಾಡೋಣ ಎಂದು ತೀರ್ಮಾನವಾಯಿತು. ಆಗಿದ್ದರೂ ನಾವು ಪ್ರತಿ ಬಾರಿ ಕರೆ ಮಾಡಿ ನಾವು ರೆಡಿ ಇದ್ದೇವೆ ಎಂದು ಹೇಳುತ್ತಲೇ ಇದ್ದೆವು. ಅವರೇ ವಿಳಂಬ ಮಾಡುತ್ತಿದ್ದರು. ನಮ್ಮ ಬಳಿ ಒಂದು ಮಾತು. ಅಲ್ಲಿ ಇನ್ನೊಂದು ರೀತಿ ಹೇಳುತ್ತಿದ್ದರು. ಬಳಿಕ ಕರೆ ಮಾಡಿದರೆ ಕೋರ್ಟ್‌ಗೆ ಹೋಗಿದ್ದಾರೆ ಎಲ್ಲವೂ ಕೋರ್ಟ್‌ನಲ್ಲೇ ಇತ್ಯರ್ಥವಾಗಲಿದೆ ಎಂದರು ಎಂದು ಮ್ಯಾನೇಜರ್ ಅಶ್ವಿನ್ ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಚಾರ್ಜ್‌ಶೀಟ್ ಸಲ್ಲಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಧ್ರುವಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.




