ಬೆಂಗಳೂರು: ಜನರಿಗೆ ರಕ್ಷಣೆ ಕಲ್ಪಿಸದೇ ಸರ್ಕಾರ ಯಾವ ಭಾಗ್ಯ ಕೊಟ್ಟರೂ ನಿರರ್ಥಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜನರಿಗೆ ಮಾನ-ಪ್ರಾಣದ ರಕ್ಷಣೆಯ ಭಾಗ್ಯ ಕಲ್ಪಿಸಲಾಗದಿದ್ದರೆ ಸರ್ಕಾರ ಯಾವ ಭಾಗ್ಯ ಕೊಟ್ಟರೂ ಅದು ನಿರರ್ಥಕ ಎಂಬ ಅರಿವು ಸರ್ಕಾರಕ್ಕಿರಬೇಕು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮಿತಿಮೀರಿದೆ.
ಫೈನಾನ್ಸ್ ಹಾವಳಿ ಹಾಗೂ ವಸೂಲಾತಿ ದೌರ್ಜನ್ಯದಿಂದ ಸಾಲಗಾರ ಬಡವರು ತತ್ತರಿಸಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶದ ಬಡ ಜನರು, ಕೃಷಿಕರು, ಸಣ್ಣ ಹಿಡುವಳಿದಾರ ರೈತರು, ಶ್ರಮಿಕ ವರ್ಗದವರು, ಬೀದಿ ಬದಿ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಸಾಲ ವಿತರಣೆ ಮಾಡುತ್ತಿದ್ದು, ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್‌ಗಳ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿರುವುದು ಬಯಲಾಗಿದೆ. ಮರ್ಯಾದೆಗೆ ಅಂಜಿ ಗ್ರಾಮೀಣ ಪ್ರದೇಶದ ಜನರು ಮನೆ ತೊರೆದು ಹೋಗುತ್ತಿದ್ದಾರೆ. ಇವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಇನ್ನು ಎಷ್ಟು ಬಿಟ್ಟಿ ಭಾಗ್ಯಗಳನ್ನು ನೀಡಿದರೇನು ಬಡವರನ್ನು ಮೈಕ್ರೋ ಫೈನಾನ್ಸ್‌ನಂತಹ ಜಾಲದ ವ್ಯೂಹಕ್ಕೆ ಬಡವರು ಸಿಲುಕಿಕೊಂಡು ನರಳುತ್ತಿರುವ ಪರಿಸ್ಥಿತಿ ಉದ್ಭವಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.