ಬೆಂಗಳೂರು: ಶಾಸಕ ಯತ್ನಾಳ್ ಏನೇನೋ ಮಾತನಾಡುತ್ತಿದ್ದಾರೋ ಅದನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲದ್ದಕ್ಕೂ ಒಂದೇ ಬಾರಿ ಉತ್ತರ ಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಪಕ್ಷದಲ್ಲಿ ಕೆಲಸ ಇದೆ. ಪ್ರತಿ ದಿನ ಇದರ ಬಗ್ಗೆಯೇ ಮಾತನಾಡಲು ಆಗಲ್ಲ. ನನ್ನ ಬಗ್ಗೆ ಮಾತನಾಡಿದರೆ ನಾನೇ ಉತ್ತರ ಕೊಡುತ್ತೇನೆ ಎಂದರು.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏಕವಚನ ಬಳಕೆ ವಿಚಾರವಾಗಿಯೂ ಮಾತನಾಡಿದ ಅವರು, ಯತ್ನಾಳ್ ಬಹಳ ಹಿರಿಯರಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೋ, ಇನ್ನೊಂದು ಭಾಷೆಯಲ್ಲಿ ಮಾತನಾಡಿದ್ದಾರೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಮಗೆ ಪಕ್ಷದಲ್ಲಿ ಮಾಡಲು ಸಾಕಷ್ಟು ಕೆಲಸ ಇದೆ ಎಂದರು.