ಬೆಂಗಳೂರು : ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂ.ದರೋಡೆ ಪ್ರಕರಣದಲ್ಲಿ ಮತ್ತೆ ನಾಲ್ವರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಮಾಜಿ ಸೈನಿಕನ ಮಗನಾದ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಗೊತ್ತಾಗಿದೆ.
ಮಾಜಿ ಸೈನಿಕನ ಮಗನಾದ ರವಿ, ಎಂಎಸ್‌ಸಿ ವ್ಯಾಸಂಗ ಮಾಡಿದ್ದು, ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ನಷ್ಟವಾಗಿದ್ದರಿಂದ ಏಜೆನ್ಸಿ ಮುಚ್ಚಿ ಮನೆಯಲ್ಲಿದ್ದರು. ಆಗ ದರೋಡೆಗೆ ಸಂಚು ರೂಪಿಸಿದ್ದರು ಎಂಬುದು ತಿಳಿದುಬಂದಿದೆ.
ಹೈದರಾಬಾದ್‌ನ ಲಾಡ್ಜ್‌ವೊಂದರಲ್ಲಿದ್ದ ನವೀನ್, ನೆಲ್ಸನ್ ಹಾಗೂ ರವಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 70 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಪ್ರಕರಣದಲ್ಲಿ ಒಟ್ಟು 7 ಜನರನ್ನು ಬಂಧಿಸಲಾಗಿದ್ದು ಇಲ್ಲಿಯವರೆಗೆ 6.45 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್‌ಸ್ಟೇಬಲ್ ಸಾಥ್ ನೀಡಿರುವ ಸ್ಛೋಟಕ ಸತ್ಯ ಈಗಾಗಲೇ ಬಯಲಾಗಿದೆ. ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್, ಸಿಎಂಎಸ್ ಕಂಪನಿ ಹಳೆ ಉದ್ಯೋಗಿ ಕ್ಸೇವಿಯರ್, ಸಿಎಂಎಸ್ ವಾಹನ ವಿಭಾಗದ ಮೇಲ್ವಿಚಾರಕ ಗೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.
ನವೆಂಬರ್ 19ರಂದು ಮಧ್ಯಾಹ್ನ ನಗರದ ಹೃದಯಭಾಗದಲ್ಲೇ ಆರೋಪಿಗಳು ದರೋಡೆ ನಡೆಸಿ ಪರಾರಿಯಾಗಿದ್ದರು. ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದ ಬೆಂಗಳೂರು ಪೊಲೀಸರು ಕೇವಲ ಮೂರೇ ದಿನದಲ್ಲಿ ಮೂವರನ್ನು ಬಂಧಿಸಿ 5.67 ಕೋಟಿ ರೂ. ವಶಕ್ಕೆ ಪಡೆದಿದ್ದರು. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ವಶಕ್ಕೆ ಪಡೆದ ಹಣದ ಮೊತ್ತ 6.45 ಕೋಟಿ ರೂ.ಆಗಿದೆ.
ಇದನ್ನು ಓದಿ: ಬೆಂಗಳೂರು ದರೋಡೆ ಪ್ರಕರಣ: ಮತ್ತೆ ಮೂವರ ಬಂಧನ
ಈ ಕೃತ್ಯದಲ್ಲಿ ಆರರಿಂದ 8 ಜನರು ಶಾಮೀಲಾಗಿರುವ ಸಾಧ್ಯತೆಯಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ್ದರು.
ಬಹುತೇಕರಿಗೆ ಮೈತುಂಬಾ ಸಾಲ
ಗ್ಯಾಂಗ್‌ನಲ್ಲಿದ್ದ ಬಹುತೇಕರಿಗೆ ಮೈತುಂಬಾ ಸಾಲ ಇತ್ತು. ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವಂತಹ ಸಾಲ ತೀರಿಸಿ ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದೆಂದು ಆರೋಪಿಗಳು ದೊಡ್ಡ ದರೋಡೆಗೆ ಮಾಡಿದ್ದರೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಸೆಕ್ಯುರಿಟಿ ಏಜೆನ್ಸಿಯಿಂದಲೂ ಲೋಪ
ಹಣ ಸಾಗಿಸುವ ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ಇರಬೇಕು. ಕಸ್ಟೋಡಿಯನ್ ವಾಹನ ಒಂದೇ ಸಮಯ, ಒಂದೇ ಮಾರ್ಗವನ್ನು ಪದೇ ಪದೆ ಬಳಸಬಾರದು. ಸಿಬ್ಬಂದಿಯು ಹಣ ನಿರ್ವಹಣೆಯ ಕುರಿತು ತರಬೇತಿ ಪಡೆದಿರಬೇಕು, ಸಿಬ್ಬಂದಿಯ ಹಿನ್ನೆಲೆಯ ಕುರಿತು ಪರಿಶೀಲನೆ ಆಗಿರಬೇಕು. ಹಾಗೂ ಕಸ್ಟೋಡಿಯನ್ ಕಂಪೆನಿಯ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಪೊಲೀಸರಿಗೆ ಮಾಹಿತಿ ನೀಡಿರಬೇಕು ಎಂದು ಆರ್‌ಬಿಐ ನಿಯಮಾವಳಿಗಳು ಸೂಚಿಸುತ್ತವೆ. ಆದರೆ ಇಲ್ಲಿ ಸಿಎಂಎಸ್ ಸೆಕ್ಯುರಿಟೀಸ್ ಕಂಪನಿಯವರಿಂದ ಕೆಲ ಲೋಪದೋಷಗಳಾಗಿರುವುದು ಕಂಡುಬಂದಿದೆ. ಆರ್‌ಬಿಐಗೆ ಪತ್ರ ಬರೆಯಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ವಾಸವಿರುವ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತನ್ನ ಪತಿ ದರೋಡೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ರವಿಯ ಸಹೋದರ ಹಾಗೂ ಅವರ ತಂದೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವ್ಯವಹಾರದಲ್ಲಿ ನಷ್ಟ
ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಸಿಎಂಎಸ್ ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್ ಬಾರ್ ನಲ್ಲಿ ಪರಿಚಿತರಾಗಿದ್ದರು. ರವಿ, ನವೀನ್ ಮತ್ತು ನೆಲ್ಸನ್ ಸ್ನೇಹಿತರು ಹಾಗೂ ಚಿತ್ತೂರಿನವರು. ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರವಿಗೆ ಗೋಪಾಲ್, ಅಣ್ಣಪ್ಪ ಅವರ ಪರಿಚಯವಿತ್ತು. ವ್ಯವಹಾರದಲ್ಲಿ ನಷ್ಟ ಹೊಂದಿದ್ದ ಕಾರಣ, ದೊಡ್ಡ ಮೊತ್ತದ ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.





