ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ನಿನ್ನೆ ಬೆದರಿಕೆ ಪತ್ರ ಬಂದಿದ್ದು, ಅವರ ರಕ್ಷಣೆಗೆ ವಿಶೇಷ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಮ್ಮ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ಪ್ರಜಾಪ್ರಭುತ್ವವನ್ನು ನಾಚಿಸುವ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಗೆ ಯತ್ನ ನಡೆಯಿತು. ಅದರ ನಂತರವೂ ಅವರ ವಿರುದ್ಧ ನಿರಂತರ ಬೆದರಿಕೆ ಒಡ್ಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ನಿನ್ನೆ(ಜನವರಿ.10) ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ ಎಂದಿದ್ದಾರೆ.
ಸಿ.ಟಿ. ರವಿ ಅವರನ್ನು ಗುರಿಯನ್ನಾಗಿಸಿಕೊಂಡಿರುವ ದುಷ್ಕರ್ಮಿಗಳು ಅವರ ವಿರುದ್ಧ ವ್ಯೂಹ ರಚಿಸಿರುವ ಸಾಧ್ಯತೆಯನ್ನು ಅವರಿಗೆ ಬಂದಿರುವ ಬೆದರಿಕೆಯ ಸಂದೇಶಗಳ ಹಿನ್ನೆಲೆಯಲ್ಲಿ ತಳ್ಳಿ ಹಾಕಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ನಿರೀಕ್ಷಿಸುವುದು “ಮಾರ್ಜಾಲ ನ್ಯಾಯದಂತಾಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.
ಸಿ.ಟಿ. ರವಿ ಅವರಿಗೆ ಬೆದರಿಕೆ ಒಡ್ಡಲಾಗುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೇ ಇದೆ. ಇಷ್ಟಾಗಿಯೂ ದುಷ್ಟ ಶಕ್ತಿಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ ಅವರು ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದಾರೆ ಎಂಬುದು ಬಹಿರಂಗ ಸತ್ಯವಾಗಿದೆ. ಈ ನಿಟ್ಟಿನಲ್ಲಿ ಸಿ.ಟಿ. ರವಿ ಅವರ ರಕ್ಷಣೆಗೆ ವಿಶೇಷ ಭದ್ರತೆ ಒದಗಿಸಲು ಒತ್ತಾಯಿಸಿದ್ದಾರೆ.
ಶಾಸಕ ಸಿ.ಟಿ. ರವಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಇಂತಹ ಬೆದರಿಕೆ, ದೌರ್ಜನ್ಯಗಳು ಮುಂದುವರೆದಲ್ಲಿ ಬಿಜೆಪಿ ಅದನ್ನು ಸವಾಲಾಗಿ ಸ್ವೀಕರಿಸಿ ಹೋರಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.