Mysore
24
overcast clouds

Social Media

ಮಂಗಳವಾರ, 29 ಏಪ್ರಿಲ 2025
Light
Dark

ಸಿದ್ದರಾಮಯ್ಯರಿಂದ ಧರ್ಮಗಳ ನಡುವೆ ಬಿರುಕು ಮೂಡಿಸಿ ದ್ವೇಷ ಬಿತ್ತುವ ಕೆಲಸ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಧರ್ಮ ಧರ್ಮಗಳ ನಡುವೆ ಬಿರುಕು ಮೂಡಿಸಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿದ್ದರಾಮಯ್ಯ ಅವರೇ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಂಮರ ಕಲ್ಯಾಣಕ್ಕಿಂತ ಅವರ ಮತಬ್ಯಾಂಕ್ ಕೇಂದ್ರೀಕರಿಸಿ ನೀವು ರೂಪಿಸುತ್ತಿರುವ ನಿಯಮ ಹಾಗೂ ಯೋಜನೆಗಳನ್ನು ಪ್ರಧಾನಿಗಳು ಟೀಕಿಸಿದ್ದಾರೆ.

ವಾಸ್ತವದಲ್ಲಿ ರಾಜ್ಯದಲ್ಲಿ ಧರ್ಮಗಳ ನಡುವೆ ಬಿರುಕು ಮೂಡಿಸಿ ದ್ವೇಷ ಬಿತ್ತುವ ಕೆಲಸಕ್ಕೆ ಮುಂದಾಗಿರುವುದು ನೀವು ಎಂದು ಕಿಡಿಕಾರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕಲ್ಪನೆಯ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಿದ್ದೀರಿ, ಇದನ್ನೇ ಪ್ರಧಾನಮಂತ್ರಿಗಳು ಹೇಳಿದ್ದಾರೆ. ನೀವೊಬ್ಬ ವಕೀಲರೂ ಹೌದು ಸಂವಿಧಾನವನ್ನು ನೀವು ಓದಿಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಕುರಿತು ನೀವು ಹೇಳಿರುವ ಮಾತುಗಳು ಆಶ್ಚರ್ಯವೆನಿಸಿದೆ.

ಸಂವಿಧಾನದ ಆರ್ಟಿಕಲ್ 15(1) ಏನು ಹೇಳುತ್ತದೆ ಎನ್ನುವುದನ್ನು ಬಹುಶಃ ನೀವು ಓದಿಕೊಂಡಂತೆ ಕಾಣುತ್ತಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿ ತಾರತಮ್ಯ ಮಾಡಲು ಎಲ್ಲಿಯೂ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನೇ ಮಾನ್ಯ ಮೋದಿ ಜೀ ಉಲ್ಲೇಖಿಸಿದ್ದಾರೆ. ಇದರಿಂದ ವಿಚಲಿತರಾಗಿರುವ ನೀವು ಮುಸ್ಲಿಂ ಓಲೈಕೆಗಾಗಿ ಭಂಡತನದ ಸಮರ್ಥನೆಗಿಳಿದಿದ್ದೀರಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಣವನ್ನು ನೆನಪಿಸಿಕೊಂಡಿದ್ದೀರಿ. ಅಲ್ಲೆಲ್ಲೂ ಧರ್ಮಾಧಾರಿತ ಮೀಸಲಾತಿ ಬೇಡ, ಇಲ್ಲವೇ ಬೇಕು ಎನ್ನುವ ಅಭಿಪ್ರಾಯ ಅಂಬೇಡ್ಕರ್ ಅವರು ಉಲ್ಲೇಖಿಸಿರುವುದಿಲ್ಲ ಎಂದು ಜಾಣ್ಮೆ ತೋರಲು ಹೊರಟಿದ್ದೀರಿ. ಆದರೆ ಸರ್ವಶ್ರೇಷ್ಠ ಸಂವಿಧಾನದ ಆರ್ಟಿಕಲ್ 15(1) ಏನು ಹೇಳುತ್ತದೆ ಎನ್ನುವುದನ್ನು ನೀವೇಕೆ ಓದಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.

ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಮೊದಲ ಬಾರಿಗೆ ಚಾರಿತ್ರಿಕ ನಿರ್ಧಾರ ತೆಗೆದುಕೊಂಡಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಎನ್ನುವುದನ್ನು ನೀವು ಮರೆಯುವಂತಿಲ್ಲ. ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತ್ರಿವಳಿ ತಲಾಕ್ ರದ್ದುಪಡಿಸಿದ್ದು, ವಕ್ಫ್ ಕಾಯ್ದೆಯ ಹೆಸರಿನಲ್ಲಿನ ಗೊಂದಲ ಹಾಗೂ ಶೋಷಣೆಯನ್ನು ತಪ್ಪಿಸುವ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವುದು, ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮರು ಹಾಗೂ ಮಹಿಳೆಯರ ಹಕ್ಕು ರಕ್ಷಿಸುವುದಕ್ಕಾಗಿಯೇ ಹೊರತು, ನಿಮ್ಮ ರೀತಿ ಮತಬ್ಯಾಂಕ್ ಕೇಂದ್ರೀಕರಿಸಿ ರಾಜಕಾರಣ ಮಾಡುವುದಕ್ಕಾಗಿ ಅಲ್ಲ.

ಜಾತಿಗಣತಿಯ ಹೆಸರಿನಲ್ಲಿ ಗೊಂದಲಗಳನ್ನು ಸೃಷ್ಟಿಸಿ ಸಮಾಜವನ್ನು ಛಿದ್ರ ಮಾಡಲು ಹೊರಟಿರುವ ನಿಮಗೆ ಪ್ರಧಾನಿಗಳನ್ನು ಕುರಿತು ಟೀಕಿಸುವ ಯಾವುದೇ ನೈತಿಕ ಹಕ್ಕು ಇಲ್ಲ. ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯ ಹೆಸರಿನಲ್ಲಿ ಪರಿಶಿಷ್ಟರೂ ಸೇರಿದಂತೆ ಇತರ ಶೋಷಿತರು ಹಾಗೂ ಬಡವರ ಹಕ್ಕು ಕಸಿಯಲಾಗುತ್ತಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟರಿಗೆ ಶೇ15 ರಿಂದ 17ಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ3 ರಿಂದ 7ಕ್ಕೆ ಹೆಚ್ಚಿಸಿದ್ದು ನಮ್ಮ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿಯೇ ಹೊರತು, ನಿಮ್ಮ ಆಡಳಿತ ಅವಧಿಯಲ್ಲಲ್ಲ ಎನ್ನುವುದು ನಿಮಗೆ ನೆನಪಿರಲಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

Tags: