ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ಅವರು ಮೊದಲು ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲಿ. ಬಳಿಕ ಬಿಜೆಪಿ-ಜೆಡಿಎಸ್ ಶಾಸಕರ ಸೇರ್ಪಡೆ ಬಗ್ಗೆ ಚಿಂತಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.20) ಎಂ.ಬಿ.ಪಾಟೀಲ್ ಅವರ ಹೇಳಿಕೆಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕಿಯೆ ನೀಡಿದ ಅವರು, ಆಡಳಿತ ಪಕ್ಷದಲ್ಲೇ ಅವರ ಶಾಸಕರು ಅನುದಾನವಿಲ್ಲ ಎಂದು ಪರದಾಡುತ್ತಿದ್ದಾರೆ. ಸರ್ಕಾರದಿಂದಲೇ ಕಾಂಗ್ರೆಸ್‌ನ ಶಾಸಕರಿಗೆ ಅನುದಾನ ನೀಡಲು ಆಗುತ್ತಿಲ್ಲ. ಅಲ್ಲದೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ 136 ಶಾಸಕರು ಇದ್ದಾರೆ. ಇನ್ನೂ ಬಿಜೆಪಿ-ಜೆಡಿಎಸ್ ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಏನು ಮಾಡುತ್ತಾರೆ? ಅವರು ಮೊದಲು ತಮ್ಮ ಪಕ್ಷದ ಶಾಸಕರನ್ನು ಅಲ್ಲಿಯೇ ಉಳಿಸಿಕೊಳ್ಳಲಿ. ಎಂದು ವಾಗ್ದಾಳಿ ನಡೆಸಿದರು.
ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಅಧಿಕಾರಕ್ಕಾಗಿ ಜಗ್ಗಾಟ ಹಾಗೂ ಗುದ್ದಾಟ ಪ್ರಾರಂಭವಾಗಿದೆ. ಮೊದಲು ಕಾಂಗ್ರೆಸ್ ಸರ್ಕಾರ ಆಯಾಯ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಲಿ. ಹೀಗಾಗಿ ಅವರು ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ಇನ್ನೂ ಸಚಿವ ಎಂ.ಬಿ.ಪಾಟೀಲ್ ಮಾತ್ರವಲ್ಲದೇ ಇನ್ಯಾರಾರು ಈ ಆಪರೇಷನ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಎಚ್ಚರಿಕೆಯಿಂದ ಇರಬೇಕು ಎಂದು ಕಿಡಿಕಾರಿದರು.