ಕಲಬುರಗಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ನಂತರ ರಾಜ್ಯ ಬಿಜೆಪಿ ಪಕ್ಷದಲ್ಲಿರುವ ಸಮಸ್ಯೆಗಳು, ಭಿನ್ನಮತಕ್ಕೆ ಉತ್ತರ ಸಿಗಲಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಇಂದು (ಜ.31) ಜಿಲ್ಲೆಯ ಸೇಡಂ ಬಳಿ ನಡೆಯುತ್ತಿರುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಲ್ಲಿ ಇರುವ ಭಿನ್ನಮತದ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿಯೂ ಬೇಸರವಿದೆ. ಅಧ್ಯಕ್ಷರ ಚುನಾವಣೆ ನಂತರ ಎಲ್ಲರೂ ಸಮಾಧಾನ ಆಗುತ್ತಾರೆ ಎಂದು ತಿಳಿಸಿದರು.
ರಾಜ್ಯ ಅಧ್ಯಕ್ಷರ ಚುನಾವಣೆ ಶೇ. 50ರಷ್ಟು ಘಟಕಗಳಿಗೆ ಅದ್ಯಕ್ಷರ ಆಯ್ಕೆ ನಡೆದಿರಬೇಕೆಂಬ ನಿಯಮವಿದೆ. ರಾಜ್ಯದಲ್ಲಿ ಪಕ್ಷದ 39 ಸಂಘಟನೆ ಘಟಕಗಳಿದ್ದು, ಈಗಾಗಲೇ 25 ಘಟಕಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಿದೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹೈಕಮಾಂಡ್ ಅಧ್ಯಕ್ಷರ ಚುನಾವಣೆ ನೋಡಿಕೊಳ್ಳಲು ನೇಮಕ ಮಾಡಿದೆ. ಸದ್ಯದಲ್ಲೇ ಅವರು ರಾಜ್ಯಕ್ಕೆ ಬರಲಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಪ್ರಬಲ ಜಾತಿಗೆ ಮಾತ್ರ ಮಣೆ ಹಾಕಲಾಗಿದೆ ಎಂಬ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡು ಮೂರು ಸಮಾಜ ನಂಬಿಕೊಂಡು ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. ಸಮಾಜದ ಎಲ್ಲ ವರ್ಗದ ಜನರನ್ನು ಕರೆದುಕೊಂಡು ಪಕ್ಷ ಸಂಘಟನೆ ಮಾಡಬೇಕು. ಇದು ಬಿಜೆಪಿ ಪಕ್ಷದ ಪ್ರಮುಖ ಧ್ಯೇಯ ಕೂಡ ಎಂದು ಹೇಳಿದರು.





