ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು ಸರ್ಕಾರವೇ ಒಪ್ಪಿಕೊಂಡಿದೆ.
ಗುರುವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಕ್ರಮ ವಲಸಿಗ ನುಸುಳುಕೋರರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರೋ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ವೀಸಾ, ಪಾಸ್‌ಪೋರ್ಟ್ ಅವಧಿ ಇರುವ ವಿದೇಶಿಗರು 5,304 ಜನ ಇದ್ದಾರೆ. ವೀಸಾ, ಪಾಸ್‌ಪೋರ್ಟ್ ಅವಧಿ ಮೀರಿದ್ದರೂ ಅಕ್ರಮವಾಗಿ 446 ವಿದೇಶಿಗರು ಇದ್ದಾರೆ. ಕಳೆದ ಮೂರು ವರ್ಷಗಳಲ್ಲಿ ದೇಶದೊಳಗೆ ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಮಾಹಿತಿ ಇಲ್ಲ. ಆದರೆ ಬೆಂಗಳೂರಿನಲ್ಲಿ ಮೂರು ವರ್ಷಗಳಲ್ಲಿ 911 ಜನ ಅಕ್ರಮ ವಲಸಿಗರನ್ನು ಗೃಹ ಇಲಾಖೆ ಗುರುತಿಸಿದೆ ಎಂದರು.
ಇದರಲ್ಲಿ ಬಾಂಗ್ಲಾದೇಶದ 868, ಪಾಕಿಸ್ತಾನ 20, ನೈಜೀರಿಯಾ 13, ಶ್ರೀಲಂಕಾ 8, ಮಯನ್ಮಾರ್ 01, ಉಗಾಂಡಾದವರು ಒಬ್ಬರು ಇದ್ದಾರೆ. 31 ದೇಶದ 365 ವಿದೇಶಿಗರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರೋ ಮಾಹಿತಿಯನ್ನು ಗೃಹ ಸಚಿವರು ನೀಡಿದ್ದಾರೆ.




