ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಸಕ್ತ ಹಣಕಾಸು ವರ್ಷ ಯಾವುದೇ ಇಲಾಖೆಯಲ್ಲಿ ಬಜೆಟ್ ನಲ್ಲಿ ಘೋಷಿಸಿದ ಅನುದಾನದ ಶೇ.40ಕ್ಕಿಂತ ಹೆಚ್ಚು ವಿನಿಯೋಗಿಸಿಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಇಲಾಖೆಯಿಂದ ಕೇವಲ ಶೇ.10 ರಷ್ಟು ಮಾತ್ರ ಅನುದಾನ ಖರ್ಚು ಮಾಡಲಾಗಿದೆ ಎಂದರು. ತೆರಿಗೆ ಸಂಗ್ರಹದಲ್ಲಿ ಸಹ ಹಿಂದೆ ಬಿದ್ದ ಪರಿಣಾಮವಾಗಿ ಈ ವರ್ಷ ಸುಮಾರು 15 ಸಾವಿರ ಕೋಟಿ ರೂ. ನಿವ್ವಳ ರಾಜಸ್ವ ಕೊರತೆ ಉಂಟಾಗುತ್ತದೆ ಎಂದ ಅವರು, ಕರ್ನಾಟಕ ಪಬ್ಲಿಕ್ ಶಾಲೆ ಆರಂಭಕ್ಕೆ ಕೈಗಾರಿಕೆಗಳ ಸಿಎಸ್ ಆರ್ ನಿಧಿಯನ್ನು ಅವಲಂಬಿಸಿದೆ. ಇದಕ್ಕಾಗಿ ರಾಜ್ಯದ ಕೈಗಾರಿಕೆಗಳು ಸದರಿ ನಿಧಿಯನ್ನು ರಾಜ್ಯಕ್ಕೆ ವಿನಿಯೋಗಿಸುವ ಬಗ್ಗೆ ನಿಯಮ ಜಾರಿಗೆ ಮುಂದಾಗಿರುವುದು ವಿಪರ್ಯಾಸ ಸಂಗತಿ ಎಂದರು.
ನೀರಾವರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ್ದ ಸಚಿವರು ವೈಯಕ್ತಿಕ ಸಂಪಾದನೆಗಾಗಿ ಬೆಂಗಳೂರು ಜಿಲ್ಲೆಯ ಹೆಸರು ಬದಲಾಯಿಸಲು ಉತ್ಸುಕರಾಗಿದ್ದಾರೆಂದು ಡಿಕೆಶಿ ವಿರುದ್ಧ ಕಿಡಿಕಾರಿದರು. ಸಿಎಂ ಮತ್ತು ಡಿಸಿಎಂ ಕುರ್ಚಿ ಕಾದಾಟದ ಪರಿಣಾಮ ಆಡಳಿತ ಸಂಪೂರ್ಣ ನಿಷ್ಕ್ರಿಯ ಗೊಂಡಿದ್ದು, ಇದರ ಲಾಭ ಪಡೆದು ಅಧಿಕಾರಿಗಳು ಸಹ ವೈಯಕ್ತಿಕ ಲಾಭ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆಂದು ದೂರಿದರು.
ಇದನ್ನು ಓದಿ: ದಿತ್ವಾ ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ವಾತಾವರಣ ಕೂಲ್ ಕೂಲ್
ಪೋಲಿಸ್ ಇಲಾಖೆಯಿಂದಲೇ ಲೂಟಿ!
2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೈಸೂರಿನ ಉದ್ಯಮಿಯ ಚಿನ್ನವನ್ನು ಪೋಲಿಸರು ಲೂಟಿ ಮಾಡಿದ್ದರು. ಈಗ ಮತ್ತೆ ಅದೇರೀತಿ ಪೋಲಿಸರ ಸಹಕಾರದಿಂದ ಬ್ಯಾಂಕ್ ಹಣ ಮತ್ತು ಚಿನ್ನ ಲೂಟಿ ಮಾಡಲಾಗುತ್ತಿದೆ. ಇತ್ತೀಚಿನ ಬೆಂಗಳೂರು ಬ್ಯಾಂಕ್ ಹಣ ಲೂಟಿ ಪ್ರಕರಣದಲ್ಲಿ ಪೋಲಿಸ್ ಭಾಗಿಯಾಗಿದ್ದ. ದಾವಣಗೆರೆ ಚಿನ್ನದ ವ್ಯಾಪಾರಿಯ ಚಿನ್ನ ಲಪಟಾವಣೆಯಲ್ಲಿ ಸಹ ಪೋಲಿಸರಿದ್ದರು. ಬೆಂಗಳೂರು ಹಣ ಲೂಟಿ ಪತ್ತೆ ಮಾಡುವಲ್ಲಿ ಗೃಹ ಸಚಿವರು ಪೋಲಿಸರಿಗೆ ಶಹಬ್ಬಾಸ್ ಗಿರಿ ಕೊಡುವ ಬದಲು ಹಣ ಲೂಟಿಕೋರರು ಬಳಸಿದ್ದ ಕಾರಿನ ಮಾಲೀಕನಿಗೆ ಅದರಲ್ಲಿ ಜಿಪಿಎಸ್ ಅಳವಡಿಸಿದ್ದಕ್ಕಾಗಿ ಆತನಿಗೆ ಶಹಬ್ಬಾಸ್ ಎನ್ನಬೇಕಿತ್ತು. ಇನ್ನು ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಜೈಲುಗಳಲ್ಲಿ ಖೈದಿಗಳ ಕೈಗೆ ಮೊಬೈಲ್ ಅಷ್ಟೇ ಅಲ್ಲದೇ ಮದ್ಯ, ಮಾದಕ ವಸ್ತುಗಳು ನಿರಾಯಾಸವಾಗಿ ಸಿಗುತ್ತದೆ ಎಂದರೆ ಸರ್ಕಾರದ ವೈಫಲ್ಯ ಎನ್ನದೇ ಏನೆನ್ನಬೇಕೆಂದು ಕುಮಾರಸ್ವಾಮಿ ಪ್ರಶ್ನಿಸಿದರು.
2 ತಿಂಗಳಲ್ಲಿ ವಿಐಎಸ್ ಎಲ್ ಪುನಶ್ಚೇತನ ಕಾರ್ಯ ಆರಂಭ
ಕೇಂದ್ರ ಉಕ್ಕು ಪ್ರಾಧಿಕಾರಕ್ಕೆ ಸೇರಿದ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸಚಿವ ಸಂಪುಟ ಈ ಹಿಂದೆ ನಿರ್ಧರಿಸಿತ್ತು. ಆದರೆ ಪ್ರಧಾನಿಯವರ ಮನವೊಲಿಸಿ ಅದನ್ನು ಕೈಬಿಟ್ಟು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 4 ಸಾವಿರ ಕೋಟಿ ವೆಚ್ಚದಲ್ಲಿ ಕಾರ್ಖಾನೆ ಆಧುನೀಕರಣಗೊಳಿಸಿ ರಕ್ಷಣಾ ಮತ್ತು ರೈಲ್ವೆ ಇಲಾಖೆಗೆ ಅಗತ್ಯ ಉತ್ಪನ್ನಗಳ ತಯಾರಿಕೆ ಕುರಿತು ಡಿಪಿಎಆರ್ ಸಿದ್ದಪಡಿಸಿದೆ. ಇಷ್ಟೇ ಅಲ್ಲದೇ ಮುಂದಿನ 50 ವರ್ಷದ ಅವಧಿಗೆ ಕಾರ್ಖಾನೆ ಯಾವುದೇ ಕೊರತೆ ಎದುರಿಸಬಾರದ ರೀತಿಯಲ್ಲಿ ಡಿಪಿಎಆರ್ ತಯಾರಿಸಲು ಸೂಚಿಸಲಾಗಿದೆ. ಈ ಕಾರ್ಖಾನೆಗೆ ಬೇಕಾಗುವ ಅದಿರನ್ನು ಈ ಹಿಂದೆ ಗುರುತಿಸಿರುವ ಪ್ರದೇಶದಲ್ಲಿ ಗಣಿಗಾರಿಕೆ ಮೂಲಕ ಪಡೆಯಲಾಗುವುದೆಂದು ಕುಮಾರಸ್ವಾಮಿ ಹೇಳಿದರು.





