ಬಲಿಷ್ಠ ಭಾರತ ವಿರುದ್ಧ ಸವಾಲುದಾಯಕ ಟೆಸ್ಟ್ ಸರಣಿಯ ಮೊದಲನೇ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತನ್ನ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಕಿರ್ಕ್ ಮೆಕೆಂಜಿ ಹಾಗೂ ಎಲಿಕ್ ಅಥನಾಝ್ ಅವರಿಗೆ ಟೆಸ್ಟ್ ತಂಡದಲ್ಲಿ ಚೊಚ್ಚಲ ಅವಕಾಶ ಕಲ್ಪಿಸಲಾಗಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎಂದಿನಂತೆ ಕ್ರೈಗ್ ಬ್ರಾಥ್‌ವೇಟ್ ತಂಡವನ್ನು ಮುನ್ನಡೆಸಲಿದ್ದಾರೆ.
ಬಾಂಗ್ಲಾದೇಶ ‘ಎ’ ತಂಡದ ವಿರುದ್ಧ ಇತ್ತೀಚೆಗೆ ವೆಸ್ಟ್ ಇಂಡೀಸ್ ‘ಎ’ ಪರ ಎಡಗೈ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿ ಹಾಗೂ ಮತ್ತೊಬ್ಬ ಎಡಗೈ ಬ್ಯಾಟ್ಸ್‌ಮನ್ ಎಲಿಕ್ ಅಥನಾಜ್ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರ ಫಲವಾಗಿ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಚೊಚ್ಚಲ ಅವಕಾಶ ಕಲ್ಪಿಸಲಾಗಿದೆ.
BREAKING NEWS – CWI announces squad for the first match of the Cycle Pure Agarbathi Test Series powered by Yes Bank against India. #WIvIND
Read More⬇️ https://t.co/YHv1icbiLj
— Windies Cricket (@windiescricket) July 7, 2023
ಈ ಇಬ್ಬರೂ ಯುವ ಬ್ಯಾಟ್ಸ್‌ಮನ್‌ಗಳ ಬಗ್ಗೆ ವಿಂಡೀಸ್ ಚೀಫ್ ಸೆಲೆಕ್ಟರ್ ದೆಶ್ಮಂಡ್ ಹೇಯ್ನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಭವಿಷ್ಯದ ತಾರೆಗಳು ಎಂದು ಅವರು ಬಣ್ಣಿಸಿದ್ದಾರೆ.
ರಕೀಮ್ ಕಾರ್ನ್‌ವೆಲ್ ಕಮ್‌ಬ್ಯಾಕ್
ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ದೈತ್ಯ ಸ್ಪಿನ್ ಆಲ್‌ರೌಂಡರ್ ರಕೀಮ್ ಕಾರ್ನ್‌ವೆಲ್ ಅವರು ಭಾರತದ ಟೆಸ್ಟ್ ಸರಣಿಗೆ ಮರಳಿದ್ದಾರೆ. 2021ರ ನವೆಂಬರ್ ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ರಕೀಮ್ ಕಾರ್ನ್‌ವೆಲ್ ಅವರು ಇದೀಗ ತಮ್ಮ ವೃತ್ತಿ ಜೀವನದ 10ನೇ ಟೆಸ್ಟ್ ಆಡಲು ಎದುರು ನೋಡುತ್ತಿದ್ದಾರೆ.
ಅಂದ ಹಾಗೆ ಮೊದಲ ಆಯ್ಕೆಯ ಸ್ಪಿನ್ನರ್ ಗುಡಕೇಶ್ ಮಾಟಿ ಅವರು ಗಾಯಕ್ಕೆ ತುತ್ತಾದ ಕಾರಣ ರಕೀಮ್ ಕಾರ್ನ್‌ವೆಲ್ ಅವರನ್ನು ಮೊದಲನೇ ಟೆಸ್ಟ್‌ಗೆ ಮಣೆ ಹಾಕಬೇಕಾಯಿತು. ಭಾರತದ ಬ್ಯಾಟ್ಸ್‌ಮನ್‌ಗಳ ಸವಾಲು ಎದುರಿಸಲು ಎಡಗೈ ಸ್ಪಿನ್ನರ್ ಜಾಮೆಲ್ ವ್ಯಾರಿಕನ್ ಅವರು ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
“ಗುಡಕೇಶ್ ಮಾಟಿ ಅವರು ಗಾಯಕ್ಕೆ ತುತ್ತಾಗಿದ್ದಾರೆ ಹಾಗೂ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ರಕೀಮ್ ಕಾರ್ನ್‌ವೆಲ್ ಹಾಗೂ ವ್ಯಾರಿಕನ್ ಅವರಿಗೆ ಮೊದಲನೇ ಟೆಸ್ಟ್ ತಂಡದ ಸ್ಪಿನ್ ವಿಭಾಗದಲ್ಲಿ ಅವಕಾಶ ಲಭಿಸಿದೆ. ಟೆಸ್ಟ್ ಆಡುವಷ್ಟು ಸಾಮರ್ಥ್ಯ ಇವರಿಬ್ಬರಿಗೆ ಇದೆ ಹಾಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರಲಿದ್ದಾರೆಂಬ ವಿಶ್ವಾಸ ನನಗಿದೆ,” ಎಂದು ದೆಶ್ಮಂಡ್ ಹೇಯ್ನ್ ತಿಳಿಸಿದ್ದಾರೆ.
ಭಾರತ ವಿರುದ್ಧ ಮೊದಲನೇ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್‌ವೇಟ್ (ನಾಯಕ), ಜರ್ಮೈನ್ ಬ್ಲಾಕ್‌ವುಡ್ (ಉಪ ನಾಯಕ), ಎಲಿಕ್ ಅಥನಾಝ್, ಟಾಗೆನರೈನ್ ಚಂದ್ರಪಾಲ್, ರಕೀಮ್ ಕಾರ್ನ್‌ವೆಲ್, ಜೊಶುವಾ ಡಾ ಸಿಲ್ವಾ, ಶನ್ನಾನ್ ಗ್ಯಾಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ರೇಯ್ಮನ್ ರೀಫರ್, ಕೆಮರ್ ರೋಚ್ ಜೊಮೆಲ್ ವ್ಯಾರಿಕನ್.
ಜುಲೈ 12 ರಂದು ಸಂಜೆ 7.30ಕ್ಕೆ ( ಭಾರತೀಯ ಕಾಲಮಾನ) ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಭಾರತ ಆಡಲಿದೆ.