ಹರಾರೆ: ಸಾಮಾಜಿಕ ಮಾಧ್ಯಮದಲ್ಲಿ ನನ್ನ ಸಾವಿನ ಕುರಿತು ವದಂತಿ ಹಬ್ಬಿಸಿರುವುದಕ್ಕೆ ನನಗೆ ನೋವಾಗಿದೆ. ವದಂತಿಯನ್ನು ಹಬ್ಬಿಸಿದವರು ಕ್ಷಮೆಯಾಚಿಸಬೇಕು ಎಂದು ಝಿಂಬಾಬ್ವೆ ಕ್ರಿಕೆಟ್ ದಂತಕತೆ ಹೀತ್ ಸ್ಟ್ರೀಕ್ ಹೇಳಿದ್ದಾರೆ.
ಸ್ಟ್ರೀಕ್ ನ ಮಾಜಿ ಸಹ ಆಟಗಾರ ಹೆನ್ರಿ ಒಲಾಂಗ ಅವರು ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿ, ನನ್ನ ಮಾಜಿ ಸಹ ಆಟಗಾರ ಸ್ಟ್ರೀಕ್ ಕ್ಯಾನ್ಸರ್ ನೊಂದಿಗೆ ದೀರ್ಘಕಾಲ ಹೋರಾಟ ನಡೆಸಿ ನಿಧನರಾದರು ಎಂದು ತಿಳಿಸಿದ್ದರು.
ಕೆಲವು ಗಂಟೆಗಳ ನಂತರ ಮತ್ತೊಂದು ಟ್ವೀಟ್ ಮಾಡಿದ್ದ ಓಲಾಂಗ, ಮಾಜಿ ಝಿಂಬಾಬ್ವೆ ನಾಯಕ ಸ್ಟ್ರೀಕ್ ವಾಸ್ತವವಾಗಿ ಜೀವಂತವಾಗಿದ್ದಾರೆ, ಚೆನ್ನಾಗಿದ್ದಾರೆ ಎಂದು ಹೇಳಿದ್ದರು.
ಸ್ವತಃ ಮಾಧ್ಯಮವೊಂದರ ಜೊತೆ ಮಾತನಾಡಿದ ಸ್ಟ್ರೀಕ್ , ನನ್ನ ಸಾವಿನ ಕುರಿತು ಸುಳ್ಳು ಸುದ್ದಿ ಮಾಡಿದ್ದಾರೆ, ನಾನು ಜೀವಂತವಾಗಿದ್ದೇನೆ ಹಾಗೂ ಚೆನ್ನಾಗಿದ್ದೇನೆ ಎಂದು ಹೇಳಿದರು.
“ಇದು ಸಂಪೂರ್ಣ ವದಂತಿ ಮತ್ತು ಸುಳ್ಳು. ನಾನು ಜೀವಂತವಾಗಿದ್ದೇನೆ ಮತ್ತು ಚೆನ್ನಾಗಿಯೇ ಇದ್ದೇನೆ. ಯಾರೋ ಒಬ್ಬರು ಸತ್ಯಾಂಶವನ್ನು ಪರಿಶೀಲಿಸದೆ ವಿಶೇಷವಾಗಿ ನಮ್ಮ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಈ ರೀತಿ ಮಾಡಿದ್ದಾರೆ. ಸುಳ್ಳು ಸುದ್ದಿಯ ಮೂಲವು ಇದಕ್ಕೆ ಕ್ಷಮೆಯಾಚಿಸಬೇಕು ಎಂದು ನಾನು ನಂಬುತ್ತೇನೆ. ಸುದ್ದಿಯಿಂದ ನನಗೆ ನೋವಾಗಿದೆ” ಎಂದು ಸ್ಟ್ರೀಕ್ ಹೇಳಿದ್ದಾರೆ.