Mysore
36
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುರೇಶ್‌ ರೈನಾ

ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಭಾರತದ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ರೈನಾ, ”ನನ್ನ ದೇಶ ಮತ್ತು ಉತ್ತರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸಿರುವುದಕ್ಕೆ ಗೌರವವಿದೆ. ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಬಿಸಿಸಿಐ, ಯುಪಿ ಕ್ರಿಕೆಟ್, ಸಿಎಸ್​ಕೆ, ರಾಜೀವ್ ಶುಕ್ಲಾ ಹಾಗೂ ನನಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ, ಸ್ನೇಹಿತರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ರೈನಾ ಇನ್ನುಮುಂದೆ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಕಾಣಿಸುವುದಿಲ್ಲ. 2020ರಲ್ಲಿ ಸ್ವಾತಂತ್ರ್ಯ ದಿನ ಆಗಸ್ಟ್‌ 15 ರಂದು ಎಂ.ಎಸ್‌ ಧೋನಿ ಜೊತೆಗೆ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದರು. ಇದೀಗ ಭಾರತದ ಎಲ್ಲ ಮಾದರಿಯ ಕ್ರಿಕೆಟ್​ನಿಂದ ಮಿಸ್ಟರ್ ಐಪಿಎಲ್ ಹಿಂದೆ ಸರಿದಿದ್ದಾರೆ. ವಿದೇಶಿ ಲೀಗ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 5000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆ ಹೊಂದಿರುವ ಸುರೇಶ್‌ ರೈನಾ, ಈವರೆಗೆ ಆಡಿದ 205 ಪಂದ್ಯಗಳಿಂದ 5528 ಎನ್‌ಗಳನ್ನು ಬಾರಿಸಿದ್ದಾರೆ. 136.7ರ ಅದ್ಭುತ ಸ್ಟ್ರೈಕ್‌ರೇಟ್‌ ಹೊಂದಿರುವ ಅವರು 32.5ರ ಅಮೋಘ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದರು. ದೇಶೀಯ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸಿರುವ ರೈನಾ, ಇನ್ಮುಂದೆ ಭಾರತದ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಹಿಡಿದು ಕಣಕ್ಕಿಳಿಯುವುದಿಲ್ಲ.

ಸುಮಾರು 13 ವರ್ಷಗಳ ಕಾಲ ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಸುರೇಶ್ ರೈನಾ, 18 ಟೆಸ್ಟ್​, 226 ಏಕದಿನ ಪಂದ್ಯ ಹಾಗೂ 78 ಟಿ20 ಪಂದ್ಯಗಳನ್ನ ಆಡಿದ್ದಾರೆ. ಕೆಲ ಪಂದ್ಯಗಳಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಒಬ್ಬರಾಗಿರುವ ರೈನಾರನ್ನು ಕಳೆದ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕೈಬಿಟ್ಟಿತ್ತು. ಹರಾಜು ಪ್ರಕ್ರಿಯೆಯಲ್ಲಿ ಅನ್​ಸೋಲ್ಡ್​ ಆಗಿದ್ದರು.

ಸುರೇಶ್‌ ರೈನಾ ಪ್ರಸ್ತುತ ಭಾರತದ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕಾರಣ ವಿದೇಶದ ಟಿ20 ಲೀಗ್‌ಗಳಲ್ಲಿ ಆಡಲು ಅರ್ಹರಾಗಿದ್ದಾರೆ. ಹೀಗಾಗಿ ದೇಶದ ಹೊರಗೆ ವಿದೇಶದ ಲೀಗ್‌ಗಳಲ್ಲಿ ಸುರೇಶ್‌ ರೈನಾ ಕಣಕ್ಕಿಳಿಯವು ಸಾಧ್ಯತೆ ಇದೆ ಎನ್ನಲಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ