ಇಸ್ಲಾಮಾಬಾದ್: ಧಾರ್ಮಿಕತೆಗಾಗಿ ಪಾಕಿಸ್ತಾನದ ಸ್ಚಾರ್ ಆಟಗಾರ್ತಿಯೊಬ್ಬರು ಕ್ರಿಕೆಟ್ ಅನ್ನೇ ತ್ಯಜಿಸಲು ಮುಂದಾಗಿದ್ದಾರೆ.
ಹೌದು.. ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಸ್ಠಾರ್ ಆಟಗಾರ್ತಿ ಆಯೇಶಾ ನಸೀಮ್ ತನ್ನ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ತನ್ನ ಮುಂದಿನ ಬದುಕನ್ನು ಇಸ್ಲಾಂ ಧರ್ಮಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.
‘ನಾನು ಇನ್ಮುಂದೆ ಇಸ್ಲಾಮಿಕ್ ಧರ್ಮದಂತೆಯೇ ಬದುಕುತ್ತೇನೆ, ಇಸ್ಲಾಮಿಕ್ ತತ್ವ ಬೋಧನೆಯನ್ನ ಅನುಸರಿಸುತ್ತೇನೆ ಎಂದು ಹೇಳಿರುವ ಆಯೇಶಾ ನಸೀಮ್, ನಾನು ಕ್ರಿಕೆಟ್ ಆಟ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.
ಆರಂಭಿಕ ಹಂತದಿಂದಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆಯೇಶಾ, ಮುಂದೆ ತಂಡ ನಾಯಕತ್ವ ವಹಿಸುವ ಭರವಸೆ ಮೂಡಿಸಿದ್ದರು. ಇದೀಗ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ. ನಸೀಮ್ ಅವರು ಇಸ್ಲಾಂ ಧರ್ಮದ ಪ್ರಕಾರ ತಮ್ಮ ಜೀವನವನ್ನು ನಡೆಸುವ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಚಾರವಾಗಿ ನಸೀಮ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
18 ವರ್ಷದ ಪಾಕ್ ಮಹಿಳಾ ಆಟಗಾರ್ತಿ ಆಯೇಶಾ ನಸೀಮ್ ಈವರೆಗೆ ನಾಲ್ಕು ಏಕದಿನ, 30 T20 ಪಂದ್ಯಗಳನ್ನಾಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಟಿ20 ಕ್ರಿಕೆಟ್‌ನಲ್ಲಿ 18:45 ಸರಾಸರಿಯಲ್ಲಿ 369 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 33 ರನ್ ಗಳಿಸಿದ್ದಾರೆ. 2023ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಕಣಕ್ಕಿಳಿದಾಗ 25 ಎಸೆತಗಳಲ್ಲಿ ಸ್ಫೋಟಕ 43 ರನ್ ಸಿಡಿಸಿದ್ದರು. 2021ರಲ್ಲಿ ಆಯೇಶಾ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದಾಗ 33 ಎಸೆತಗಳಲ್ಲಿ 45 ರನ್ ಗಳಿಸಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಕ್ರಿಕೆಟ್‌ನಲ್ಲಿ 31 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದ್ದರು.