Mysore
25
overcast clouds
Light
Dark

ʼರೋಹಿತ್‌ ನಾಯಕನಾಗಲು ನಾನೇ ಕಾರಣʼ; ಗಂಗೂಲಿ ಹೇಳಿಕೆಗೆ ಕೊಹ್ಲಿ ಫ್ಯಾನ್ಸ್‌ ಗರಂ

ganguly about rohit sharma captaincy

ಸದ್ಯ ಭಾರತದಲ್ಲಿ ಏಕದಿನ ವಿಶ್ವಕಪ್‌ ಸಮರ ನಡೆಯುತ್ತಿದ್ದು ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ ಸುತ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿವೆ. ಇನ್ನುಳಿದ ಒಂದು ಸ್ಥಾನಕ್ಕೆ ನ್ಯೂಜಿಲೆಂಡ್‌ ತಂಡ ಅರ್ಹತೆ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ನಾಲ್ಕು ತಂಡಗಳಲ್ಲಿ ಯಾವ ತಂಡ ಚಾಂಪಿಯನ್‌ ಆಗಲಿದೆ ಎಂಬ ಕುತೂಹಲ ಮೂಡಿದೆ.

ಇನ್ನು ಟೀಮ್‌ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ತಂಡ ಎಂಬ ದಾಖಲೆ ಬರೆದಿದೆ. ಹೌದು, ಟೀಮ್‌ ಇಂಡಿಯಾ ಇಲ್ಲಿಯವರೆಗೂ ಆಡಿರುವ ಎಲ್ಲಾ ಎಂಟು ಲೀಗ್‌ ಪಂದ್ಯಗಳಲ್ಲಿಯೂ ಭರ್ಜರಿ ಜಯ ಸಾಧಿಸಿದ್ದು, ಸೆಮೀಸ್‌ಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿಕೊಂಡಿತ್ತು.

ತಂಡದ ಎಲ್ಲಾ ವಿಭಾಗವೂ ಯಶಸ್ವಿ ಪ್ರದರ್ಶನ ನೀಡುತ್ತಿರುವ ಕಾರಣ ತಂಡ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದು, ನಾಯಕ ರೋಹಿತ್‌ ಶರ್ಮಾಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಸಹ ಈ ಕುರಿತು ಪ್ರತಿಕ್ರಿಯಿಸಿದ್ದು, ರೋಹಿತ್‌ ಶರ್ಮಾ ನಾಯಕನಾಗಲು ತಾನು ಸ್ವತಃ ಒತ್ತಾಯಿಸಿದ್ದೆ ಎಂಬ ವಿಚಾರವನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಗಂಗೂಲಿ ಮೊದಲಿಗೆ ರೋಹಿತ್‌ಗೆ ನಾಯಕತ್ವವನ್ನು ವಹಿಸುಕೊಳ್ಳುವಂತೆ ತಾವು ಕೇಳಿದ್ದಾಗ ನಿರಾಕರಿಸಿದ್ದರು ಎಂದಿದ್ದಾರೆ. “ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ ಆಡಬೇಕಿದ್ದ ಕಾರಣ ಒತ್ತಡ ಹೆಚ್ಚಿದ್ದರಿಂದ ರೋಹಿತ್‌ಗೆ ನಾಯಕನ ಪಟ್ಟ ಬೇಕಿರಲಿಲ್ಲ. ಒಂದು ಹಂತದಲ್ಲಿ ನೀನು ನಾಯಕನಾಗಲು ಒಪ್ಪದೇ ಇದ್ದರೆ ನಾನೇ ಸ್ವತಃ ನಿನ್ನ ಹೆಸರನ್ನು ಘೋಷಿಸುತ್ತೇನೆ ಎಂದಿದ್ದೆ. ಆತ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರ ಬಗ್ಗೆ ನನಗೆ ಸಂತಸವಿದೆ, ಆತ ಅಚ್ಚುಕಟ್ಟಾಗಿ ನಾಯಕತ್ವ ನಿರ್ವಹಿಸುತ್ತಿದ್ದಾನೆ, ಫಲಿತಾಂಶವನ್ನು ನೀವೇ ನೋಡಬಹುದಾಗಿದೆ” ಎಂದು ಗಂಗೂಲಿ ಹೇಳಿದ್ದಾರೆ.

ಹೀಗೆ ಗಂಗೂಲಿ ನೀಡಿದ ಹೇಳಿಕೆ ಈ ಹಿಂದೆ ಎದ್ದಿದ್ದ ದೊಡ್ಡ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಹೌದು, ವಿರಾಟ್‌ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಆಗ ಬಿಸಿಸಿಐ ಅಧ್ಯಕ್ಷನಾಗಿದ್ದ ಗಂಗೂಲಿ ಎಂಬ ಸುದ್ದಿ ಹರಿದಾಡಿತ್ತು. ಇದರಿಂದ ಕೊಹ್ಲಿ ಅಭಿಮಾನಿಗಳು ದಾದಾ ವಿರುದ್ಧ ತಿರುಗಿಬಿದ್ದಿದ್ರು. ಸದ್ಯ ರೋಹಿತ್‌ ಅನ್ನು ಒತ್ತಾಯಪೂರ್ವಕವಾಗಿ ನಾಯಕ ಮಾಡಿದೆ ಎಂಬ ದಾದಾ ಹೇಳಿಕೆ ಕೊಹ್ಲಿ ಅಭಿಮಾನಿಗಳನ್ನು ಮತ್ತೆ ಕೆರಳಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ