ಹೊಸದಿಲ್ಲಿ: ಹಲವು ಕಾರಣದಿಂದ ಕುತೂಹಲ ಮೂಡಿಸಿರುವ ಏಷ್ಯಾ ಕಪ್ ಕೂಟವು ಇದೀಗ ಪಾಕಿಸ್ಥಾನದ ಕೈ ತಪ್ಪುವ ಸಾಧ್ಯತೆಯಿದೆ. ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ, ಏಷ್ಯಾ ಕಪ್ ಆತಿಥ್ಯದಿಂದ ಪಾಕಿಸ್ಥಾನದಿಂದ ಬಹುತೇಕ ಹೊರಬಿದ್ದಿದೆ.
ಈ ಬಾರಿಯ ಏಷ್ಯಾ ಕಪ್ ಕೂಟವು ಪಾಕಿಸ್ಥಾನದಲ್ಲಿ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೆ ಪಾಕಿಸ್ಥಾನಕ್ಕೆ ತಾವು ತೆರಳುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟ ಪಡಿಸಿದೆ. ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ತಟಸ್ಥ ಸ್ಥಳದಲ್ಲಿ ಆಡುವುದು ಮತ್ತು ಪಾಕಿಸ್ತಾನವು ತನ್ನ ಎಲ್ಲಾ ಪಂದ್ಯಗಳನ್ನು ತವರಿನಲ್ಲಿ ಆಡುವುದರೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಅವರು ಪಂದ್ಯಾವಳಿ ಆಡುವ ಪ್ರಸ್ತಾಪವೂ ಇತ್ತು.
ಆದರೆ ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಪಂದ್ಯಾವಳಿಯನ್ನು ಸಂಪೂರ್ಣವಾಗಿ ಹೊಸ ದೇಶಕ್ಕೆ ಸ್ಥಳಾಂತರಿಸಬಹುದು. ಪಂದ್ಯಾವಳಿಯನ್ನು ಆಯೋಜಿಸಲು ಶ್ರೀಲಂಕಾ ಮುಂಚೂಣಿಯಲ್ಲಿದೆ. ಬಾಂಗ್ಲಾದೇಶವೂ ಆಸಕ್ತಿ ತೋರಿದೆ.
ಮುಂದಿನ ತಿಂಗಳು ನಡೆಯುವ ಎಸಿಸಿ ಸಭೆಯಲ್ಲಿ ಹೊಸ ಆತಿಥ್ಯ ದೇಶದ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಕಳೆದ ಬಾರಿಯ ಏಷ್ಯಾ ಕಪ್ ಕೂಟವು ಯುಎಇ ನಲ್ಲಿ ನಡೆದಿತ್ತು. ಅಚ್ಚರಿಯ ರೀತಿಯಲ್ಲಿ ದಸುನ್ ಶನಕಾ ನಾಯಕತ್ವದ ಶ್ರೀಲಂಕಾ ತಂಡವು ಕೂಟ ಗೆದ್ದುಕೊಂಡಿತ್ತು. ಈ ಬಾರಿಯ ಏಷ್ಯಾಕಪ್ ಕೂಟ ಏಕದಿನ ಮಾದರಿಯಲ್ಲಿ ನಡೆಯಲಿದೆ.