ಮುಂಬೈ: ಬಹುನಿರೀಕ್ಷಿತ ದೇಶಿಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 18ನೇ ಆವೃತ್ತಿಯು ಮಾರ್ಚ್.23ರಿಂದ ಆರಂಭವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಇಲ್ಲಿಯವರೆಗೆ ಐಪಿಎಲ್ ಸಮಿತಿಯು ತನ್ನದೇ ಆದ ನಿಯಮಗಳನ್ನು ಪಾಲಿಸುತ್ತಿತ್ತು. ಆದರೆ ಇನ್ನು ಮುಂದೆ ಐಸಿಸಿ ನೀತಿಸಂಹಿತೆ ಜಾರಿಯಾಗಲಿದೆ. ಐಪಿಎಲ್ ಆಟಗಾರರೂ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಐಪಿಎಲ್ ಕಾರ್ಯಕಾರಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಐಸಿಸಿಯ ಅಂತರಾಷ್ಟ್ರೀಯ ಟಿ20 ನಿಯಮಗಳ ಪ್ರಕಾರ ಲೆವೆಲ್ 1, 2, 3ಯ ಅಪರಾಧ ಮಾಡಿದ ಐಪಿಎಲ್ ಆಟಗಾರರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಪಂದ್ಯಗಳು ನಾಲ್ಕು ನಗರಗಳಲ್ಲಿ ನಡೆಯಲಿದ್ದು, ಲಖನೌ, ಮುಂಬೈ, ಬರೋಡಾ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ಸಾದ್ಯತೆ ಇದೆ ಎಂದು ತಿಳಿಸಲಾಗಿದೆ.