Mysore
20
overcast clouds
Light
Dark

IPL 2024: ಕೊಹ್ಲಿ ಅರ್ಧಶತಕ, ಕಾರ್ತಿಕ್‌ ಅಬ್ಬರಕ್ಕೆ ತಲೆಬಾಗಿದ ಪಂಜಾಬ್ ; ಗೆಲುವಿನ ಖಾತೆ ತೆರೆದ ಆರ್‌ಸಿಬಿ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಆರನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬೌಲಿಂಗ್‌ ಆಯ್ದುಕೊಂಡು ಎದುರಾಳಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಕಲೆಹಾಕಿ ಆರ್‌ಸಿಬಿಗೆ 177 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ಅರ್ಧಶತಕ ಹಾಗೂ ದಿನೇಶ್‌ ಕಾರ್ತಿಕ್‌ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 178 ರನ್‌ ಕಲೆಹಾಕಿತು.

ಪಂಜಾಬ್‌ ಕಿಂಗ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶಿಖರ್‌ ಧವನ್‌ 45 (37) ಹಾಗೂ ಜಾನಿ ಬೈರ್‌ಸ್ಟೋ 8 (6) ರನ್‌ ಗಳಿಸಿದರು. ಇನ್ನುಳಿದಂತೆ ಪ್ರಭ್‌ಸಿಮ್ರಾನ್‌ ಸಿಂಗ್‌ 25 (17) ರನ್‌, ಲಿಯಾಮ್‌ ಲಿವಿಂಗ್‌ಸ್ಟನ್‌ 17 (13) ರನ್‌, ಸ್ಯಾಮ್‌ ಕರನ್‌ 23 (17) ರನ್‌, ಜಿತೇಶ್‌ ಶರ್ಮಾ 27 (20) ರನ್‌, ಶಶಾಂಕ್‌ ಸಿಂಗ್‌ ಅಜೇಯ 21 (8) ಮತ್ತು ಹರ್‌ಪ್ರೀತ್‌ ಬ್ರಾರ್‌ ಅಜೇಯ 2 (2) ರನ್ ಗಳಿಸಿದರು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಮೊಹಮ್ಮದ್‌ ಸಿರಾಜ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಲಾ 2 ವಿಕೆಟ್‌ ಪಡೆದರೆ, ಯಶ್‌ ದಯಾಳ್‌ ಮತ್ತು ಅಲ್ಜಾರಿ ಜೋಸೆಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ನಾಯಕ ಫಾಫ್‌ ಡುಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಕಣಕ್ಕಿಳಿದರು. ಡುಪ್ಲೆಸಿಸ್‌ 3(7) ರನ್‌ ಗಳಿಸಿ ನಿರಾಸೆ ಮೂಡಿಸಿದರು. ನಂತರ ಕಣಕ್ಕಿಳಿದ ಕ್ಯಾಮೆರಾನ್‌ ಗ್ರೀನ್‌ ಸಹ 3 (5) ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಇನ್ನುಳಿದಂತೆ ರಜತ್‌ ಪಟಿದಾರ್‌ 18 (18) ರನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ 3(5) ರನ್‌ ಮತ್ತು ಅನುಜ್‌ ರಾವತ್‌ 11 (14) ರನ್‌ ಗಳಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಏಕಾಂಗಿ ಹೋರಾಟ ನಡೆಸಿದ ವಿರಾಟ್‌ ಕೊಹ್ಲಿ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 77 ರನ್‌ ಗಳಿಸಿ ಔಟ್‌ ಆದರು. ಕೊಹ್ಲಿ ಔಟ್‌ ಆದ ಬಳಿಕ ಏಳನೇ ವಿಕೆಟ್‌ಗೆ ಜತೆಯಾದ ದಿನೇಶ್‌ ಕಾರ್ತಿಕ್‌ ಹಾಗೂ ಮಹಿಪಾಲ್‌ ಲೊಮ್ರೊರ್‌ ಜೋಡಿ 18 ಎಸೆತಗಳಿಗೆ 48 ರನ್‌ಗಳ ಜತೆಯಾಟವಾಡುವ ಮೂಲಕ ಆರ್‌ಸಿಬಿಗೆ ಗೆಲುವು ತಂದಿಟ್ಟರು. ಲೊಮ್ರೊರ್‌ ಅಜೇಯ 17(8) ರನ್‌ ಗಳಿಸಿದರೆ, ದಿನೇಶ್‌ ಕಾರ್ತಿಕ್‌ 10 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ ಅಜೇಯ 28 ರನ್‌ ಬಾರಿಸಿ ಅಬ್ಬರಿಸಿದರು.

ಪಂಜಾಬ್‌ ಕಿಂಗ್ಸ್‌ ಪರ ಕಗಿಸೊ ರಬಾಡಾ ಹಾಗೂ ಹರ್‌ಪ್ರೀತ್‌ ಬ್ರಾರ್‌ ತಲಾ ಎರಡು ವಿಕೆಟ್‌ ಪಡೆದರೆ, ಹರ್ಷಲ್‌ ಪಟೇಲ್‌ ಹಾಗೂ ಸಾಮ್‌ ಕರನ್‌ ತಲಾ ಒಂದೊಂದು ವಿಕೆಟ್‌ ಪಡೆದರು