ದುಬೈ: ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಪೂರ್ವಭಾವಿಯಾಗಿ ಟ್ರೋಫಿ ಪ್ರವಾಸಕ್ಕೆ ಐಸಿಸಿ ಸೋಮವಾರ ಬಾಹ್ಯಾಕಾಶದಲ್ಲಿ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದೆ. ಭೂಮಿಗಿಂತ 1,20,000 ಅಡಿ ಎತ್ತರದಲ್ಲಿ ಟ್ರೋಫಿಯನ್ನು ಐಸಿಸಿ ಅನಾವರಣಗೊಳಿಸಿದ್ದು, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟ್ರೋಫಿಯನ್ನು ಅದ್ಭುತವಾಗಿ ಲ್ಯಾಂಡಿಂಗ್ ಮಾಡಲಾಯಿತು.
ವಾಯುಮಂಡಲಕ್ಕೆ ಹೊಂದಿಕೊಳ್ಳುವ ಬಲೂನ್ ಮೂಲಕ ಟ್ರೋಫಿಯನ್ನು ಆಕಾಶಕ್ಕೆ ತೆಗೆದುಕೊಂಡು ಹೋಗಿ, ಭೂಮಿಯ ವಾತಾವರಣದ ಅಂಚಿನಲ್ಲಿ ಅದ್ಭುತವಾಗಿ ಅದರ ಚಿತ್ರಗಳನ್ನು 4ಕೆ ಕ್ಯಾಮರಾಗಳ ಮೂಲಕ ಸೆರೆ ಹಿಡಿಯಲಾಯಿತು.
ಈ ಸಲದ ಟ್ರೋಫಿ ಟೂರ್ ಇದುವರೆಗಿನ ಅತಿದೊಡ್ಡ ಪ್ರವಾಸವಾಗಿದ್ದು, ವಿಶ್ವದೆಲ್ಲೆಡೆಯ ಅಭಿಮಾನಿಗಳಿಗೆ ವಿಶ್ವಕಪ್ ಟ್ರೋಫಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 27ರಿಂದ ಒಟ್ಟು 18 ದೇಶಗಳಿಗೆ ಟ್ರೋಫಿ ಪ್ರವಾಸ ಕೈಗೊಳ್ಳಲಿದೆ. ಇದರಲ್ಲಿ ಕುವೈತ್, ಬಹರೇನ್, ಮಲೇಷ್ಯಾ, ಅಮೆರಿಕ, ನೈಜೀರಿಯಾ, ಉಗಾಂಡ, ಫ್ರಾನ್ಸ್, ಇಟಲಿಯಂಥ ಕ್ರಿಕೆಟ್ ಜನಪ್ರಿಯವಲ್ಲದ ದೇಶಗಳೂ ಇವೆ.
The #CWC23 Trophy in space 🌠🤩
The ICC Men's Cricket World Cup 2023 Trophy Tour is HERE 👉 https://t.co/mKCK0WXZSI pic.twitter.com/zuPsrDbeBy
— ICC Cricket World Cup (@cricketworldcup) June 26, 2023
ಜೂನ್ 27ರಿಂದ ಜುಲೈ 14ರವರೆಗೆ ಭಾರತದಲ್ಲೇ ಪ್ರವಾಸ ಕೈಗೊಳ್ಳಲಿರುವ ಐಸಿಸಿ ಟ್ರೋಫಿ, ಜುಲೈ 15-16ರಂದು ನ್ಯೂಜಿಲೆಂಡ್, ಜುಲೈ 17-18ರಂದು ಆಸ್ಟ್ರೆಲಿಯಾ, ಜುಲೈ 19-21ರಂದು ಪಪುವಾ ನ್ಯೂಗಿನಿ, ಜುಲೈ 22-24ರಂದು ಭಾರತ, ಜುಲೈ 25-27ರಂದು ಅಮೆರಿಕ, ಜುಲೈ 28-30ರಂದು ವೆಸ್ಟ್ ಇಂಡೀಸ್, ಜುಲೈ 31-ಆಗಸ್ಟ್ 4ರಂದು ಪಾಕಿಸ್ತಾನ, ಆಗಸ್ಟ್ 5-6ರಂದು ಶ್ರೀಲಂಕಾ, ಆಗಸ್ಟ್ 7-9ರಂದು ಬಾಂಗ್ಲಾದೇಶ, ಆಗಸ್ಟ್ 10-11ರಂದು ಕುವೈತ್, ಆಗಸ್ಟ್ 12-13ರಂದು ಬಹರೇನ್, ಆಗಸ್ಟ್ 14-15ರಂದು ಭಾರತ, ಆಗಸ್ಟ್ 16-18ರಂದು ಇಟಲಿ, ಆಗಸ್ಟ್ 19-20ರಂದು ಫ್ರಾನ್ಸ್, ಆಗಸ್ಟ್ 21-24ರಂದು ಇಂಗ್ಲೆಂಡ್, ಆಗಸ್ಟ್ 25-26ರಂದು ಮಲೇಷ್ಯಾ, ಆಗಸ್ಟ್ 27-28ರಂದು ಉಗಾಂಡ, ಆಗಸ್ಟ್ 29-30ರಂದು ನೈಜೀರಿಯಾ, ಆಗಸ್ಟ್ 31-ಸೆಪ್ಟೆಂಬರ್ 3ರಂದು ದಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಸೆಪ್ಟೆಂಬರ್ 4ರಿಂದ ಟೂರ್ನಿಯವರೆಗೆ ಆತಿಥೇಯ ಭಾರತದಲ್ಲೇ ಪ್ರವಾಸದಲ್ಲಿರಲಿದೆ.