ಮೊಹಾಲಿ : ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (52 ರನ್, 53 ಎಸೆತ), ಜೋಶ್ ಇಂಗ್ಲಿಸ್(45 ರನ್, 45 ಎಸೆತ)ಹೋರಾಟಕಾರಿ ಇನಿಂಗ್ಸ್ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಭಾರತ ತಂಡಕ್ಕೆ ಮೊದಲ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದ ಗೆಲುವಿಗೆ 277 ರನ್ ನೀಡಿದೆ.
ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ನಿಗದಿತ 50 ಓವರ್ ಗಳಲ್ಲಿ 276 ರನ್ ಗಳಿಸಿ ಆಲೌಟಾಗಿದೆ. ವೇಗದ ಬೌಲರ್ ಮುಹಮ್ಮದ್ ಶಮಿ(5-51) ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು.
ಆಸ್ಟ್ರೇಲಿಯ ಇನಿಂಗ್ಸ್ ನ ಮೊದಲ ಓವರ್ ನಲ್ಲೇ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ವೇಗದ ಬೌಲರ್ ಮುಹಮ್ಮದ್ ಶಮಿ(5-51)ಆಸ್ಟ್ರೇಲಿಯಕ್ಕೆ ಆರಂಭಿಕ ಆಘಾತ ನೀಡಿದರು.
ಆಗ ಎರಡನೇ ವಿಕೆಟ್ ಗೆ 94 ರನ್ ಜೊತೆಯಾಟ ನಡೆಸಿದ ವಾರ್ನರ್ ಹಾಗೂ ಸ್ಟೀವ್ ಸ್ಮಿತ್(41 ರನ್, 60 ಎಸೆತ)ತಂಡವನ್ನು ಆಧರಿಸಿದರು.
ಜೋಶ್ ಇಂಗ್ಲಿಸ್(45 ರನ್, 45 ಎಸೆತ), ಮಾರ್ನಸ್ ಲ್ಯಾಬುಶೇನ್(39 ರನ್, 49 ಎಸೆತ) , ಕ್ಯಾಮರೂನ್ ಗ್ರೀನ್(31 ರನ್, 52 ಎಸೆತ) ಹಾಗೂ ಮಾಕರ್ಸ್ ಸ್ಟೋನಿಸ್(29 ರನ್, 21 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಪ್ಯಾಟ್ ಕಮಿನ್ಸ್ 9 ಎಸೆತಗಳಲ್ಲಿ 21 ರನ್ ಬಾರಿಸಿ ತಂಡ 277 ರನ್ ಕಲೆಹಾಕುವಲ್ಲಿ ಸಹಾಯಕರಾದರು.
ಭಾರತದ ಬೌಲಿಂಗ್ ನಲ್ಲಿ ಮುಹಮ್ಮದ್ ಶಮಿ(5-51) ಯಶಸ್ವಿ ಪ್ರದರ್ಶನ ನೀಡಿದರೆ, ಜಸ್ಪ್ರಿತ್ ಬುಮ್ರಾ(1-43), ಆರ್.ಅಶ್ವಿನ್(1-47) ಹಾಗೂ ರವೀಂದ್ರ ಜಡೇಜ(1-51) ತಲಾ ಒಂದು ವಿಕೆಟ್ ಪಡೆದರು.