ವೆಲ್ಲಿಂಗ್ಟನ್: ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಪಿ ಏಕದಿನ ಕ್ರಿಕೆಟ್ ಟೂರ್ನಿಗೆ ನ್ಯೂಜಿಲೆಂಡ್‌ನ 15 ಸದಸ್ಯರ ತಂಡ ಪ್ರಕಟವಾಗಿದ್ದು, ತಂಡದ ನಾಯಕನಾಗಿ ಸ್ಪಿನ್ ಬೌಲರ್ ಮಿಚೆಲ್ ಸ್ಯಾಂಟ್ನರ್ ಆಯ್ಕೆಯಾಗಿದ್ದಾರೆ.
ಅನುಭವಿಗಳಾದ ಕೇನ್ ವಿಲಿಯಮ್ಸನ್, ಟಾಮ್ ಬ್ಲಂಡೆಲ್, ಟಾಮ್ ಲಥಾಮ್, ಡೆವೋನ್ ಕಾನ್ವೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಐವರು ವೇಗಿಗಳಿಗೆ ಸ್ಥಾನ ನೀಡಲಾಗಿದ್ದು, ಬೆನ್ ಸೀರ್ಸ್, ನಾಥನ್ ಸ್ಮಿತ್ ಹಾಗೂ ವಿಲ್ ಓ ರೂರ್ಕಿ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.
ನ್ಯೂಜಿಲೆಂಡ್ ಕಂಡ ಶ್ರೇಷ್ಠ ಬೌಲರ್‌ಗಳೆನಿಸಿದ್ದ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ವಿದಾಯದ ಬಳಿಕ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಹೊಣೆ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗ್ಯೂಸನ್ ಮೇಲಿದೆ.
ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19ರಂದು ಆರಂಭವಾಗಲಿದೆ. ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯವನ್ನು ಅತಿಥೇಯ ಪಾಕಿಸ್ತಾನ ವಿರುದ್ಧ ಆಡಲಿದೆ.
ನ್ಯೂಜಿಲೆಂಡ್ ತಂಡ: ಮಿಚೇಲ್ ಸ್ಯಾಂಟ್ನರ್ (ನಾಯಕ), ಕೇನ್ ವಿಲಿಯಮ್ಸನ್, ವಿಲ್ ಯಂಗ್, ಮಿಚೇಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೋನ್ ಕಾನ್ವೆ, ಲಾಕಿ ಫರ್ಗ್ಯೂಸನ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಡೆರಿಲ್ ಮಿಚೇಲ್, ವಿಲ್ ಓ ರೂರ್ಕಿ, ಬೆನ್ ಸೀರ್ಸ್, ನಾಥನ್ ಸ್ಮಿತ್