Mysore
26
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಬಾಕ್ಸಿಂಗ್‌ ಡೇ ಟೆಸ್ಟ್: ಮಿಂಚಿದ ಬೂಮ್ರಾ: ಕೊನೆಯಲ್ಲಿ ಕಾಡಿದ ಲಯನ್‌

ಮೆಲ್ಬೋರ್ನ್‌: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ 4ನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಸವಾಲಿನ ಮೊತ್ತ ಗಳಿಸಿದೆ.

ಕಡಿಮೆ ಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದ ಆಸ್ಟ್ರೇಲಿಯಾಗೆ ಕೊನೆಯಲ್ಲಿ ಬ್ಯಾಟರ್‌ಗಳಾದ ನಾಥನ್‌ ಲಿಯಾನ್‌ ಹಾಗೂ ಬೋಲ್ಯಾಂಡ್‌ ಅವರ ಆಟದ ನೆರವಿನಿಂದ 4ನೇ ದಿನದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 228 ರನ್‌ ಗಳಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ 333 ರನ್‌ಗಳ ಮುನ್ನಡೆ ಸಾಧಿಸಿದೆ.

ಮೆಲ್ಬೋರ್ನ್‌ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅತಿಥೇಯ ತಂಡ ಸ್ಟೀವ್‌ ಸ್ಮಿತ್‌ 140(197) ಶತಕದ ನೆರವಿನಿಂದ 474 ರನ್‌ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ ನಿತೀಶ್‌ ಕುಮಾರ್ ರೆಡ್ಡಿ 114(189) ಅವರ ಶತಕದ ಹೊರತಾಗಿಯೂ 369 ರನ್‌ ಗಳಿಸಲಷ್ಟೇ ಶಕ್ತವಾಯಿತು.

105 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ವೇಗಿಗಳಾದ ಜಸ್ಪ್ರಿತ್‌ ಬುಮ್ರಾ ಹಾಗೂ ಮಹಮ್ಮದ್‌ ಸಿರಾಜ್‌ ಕಾಡತೊಡಗಿದರು.

ಕಳೆದ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ್ದ ಆಸೀಸ್‌ನ ಆರಂಭಿಕ ಬ್ಯಾಟರ್‌ ಸ್ಯಾಮ್‌ ಕೋನ್‌ಸ್ಟಾಸ್‌ 8(18) ಅವರನ್ನು ಬುಮ್ರಾ ಬೌಲ್ಡ್‌ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ನಂತರ ಉಸ್ಮಾನ್‌ ಖ್ವಾಜಾ 21(65) ಕೂಡ ಸಿರಾಜ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು.

ಇವರ ನಂತರ ಬಂದ ಬ್ಯಾಟರ್‌ಗಳು ಸ್ಟೀವ್‌ ಸ್ಮಿತ್‌ 13(41), ಟ್ರಾವಿಸ್‌ ಹೆಡ್‌ 1(2), ಮಿಚೆಲ್‌ ಮಾರ್ಷ್‌ 0(4), ಹಾಗೂ ಅಲೆಕ್ಸ್‌ ಕ್ಯಾರಿ 2(7) ಬಂದ ದಾರಿಗೆ ಸುಂಕವಿಲ್ಲದಂತೆ ಪವಿಲಿಯನ್‌ ಪೆರೇಡ್‌ ನಡೆಸಿದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಇನ್ನೊಂದೆಡೆ ನೆಲಕಚ್ಚಿ ಆಡಿದ ಮಾರ್ನಸ್‌ ಲಾಬುಶೇನ್‌ 7ನೇ ವಿಕೆಟ್‌ಗೆ ಕಮಿನ್ಸ್‌ ಜೊತೆಯಲ್ಲಿ 57(116) ಅರ್ಧಶತಕದ ಜೊತೆಯಾಟ ಆಡಿ ಸ್ವಲ್ಪ ಚೇತರಿಕೆ ನೀಡಿದರು.

ಮಾರ್ನಸ್‌ 70(139) ರನ್‌ಗಳಿಸಿ ಆಡುತ್ತಿದ್ದಾಗ ಸಿರಾಜ್‌ ಬೌಲಿಂಗ್‌ನಲ್ಲಿ ಎಲ್‌ಬಿ ಆದರು. ನಂತರ ಕಮಿನ್ಸ್‌ 40(90) ರನ್‌ಗಳಿಸಿ ಜಡೇಜಾಗೆ ವಿಕೆಟ್‌ ಒಪ್ಪಿಸಿದರು.

ಆಸ್ಟ್ರೇಲಿಯಾದ ಇನ್ನಿಂಗ್ಸ್‌ ಮುಗಿಸಿ ತಮ್ಮ ಇನ್ನಿಂಗ್ಸ್‌ ಬೇಗ ಆರಂಭಿಸುವ ಯೋಚನೆಯಲ್ಲಿದ್ದ ಭಾರತಕ್ಕೆ ಕೊನೆಯಲ್ಲಿ ನಾಥನ್‌ ಲಿಯಾನ್‌ ಹಾಗೂ ಸ್ಕಾಟ್‌ ಬೋಲ್ಯಾಂಡ್‌ ಕಾಡಿದರು. ಇಬ್ಬರು ಜೊತೆಯಾಗಿ ಅರ್ಧಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ಮೂನ್ನೂರರ ಗಡಿ ದಾಟಲು ನೆರವಾದರು.

ಒಟ್ಟಾರೆ ನಾಥನ್‌ ಲಿಯಾನ್‌ 41(54) ಮತ್ತು ಸ್ಕಾಟ್‌ ಬೋಲ್ಯಾಂಡ್‌ 10(65) ರನ್‌ ಬಾರಿಸಿ ನಾಟ್‌ಔಟ್‌ ಆಗುವ ಮೂಲಕ 5ನೇ ದಿನದಾಟ ಕಾಯ್ದುಕೊಂಡಿದ್ದಾರೆ.

ಇನ್ನು ಭಾರತ ಪರ ಬುಮ್ರಾ 4 ವಿಕೆಟ್‌ ಪಡೆದರೆ, ಸಿರಾಜ್‌ 3 ವಿಕೆಟ್‌ ಹಾಗೂ ಜಡೇಜಾ ಒಂದು ವಿಕೆಟ್‌ ಉರುಳಿಸಿದರು.

Tags: