ಢಾಕಾ: ಅಫ್ಘಾನಿಸ್ತಾನ ವಿರುದ್ದದ ಏಕೈಕ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶವು ಭರ್ಜರಿಯಾಗಿ ಗೆದ್ದುಕೊಂಡಿದೆ. ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯವನ್ನು ಲಿಟ್ಟನ್ ದಾಸ್ ಪಡೆ 546 ರನ್ ಅಂತರದಿಂದ ಗೆದ್ದು ಬೀಗಿದೆ.
ಬಾಂಗ್ಲಾದೇಶ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ. ಅವರು ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಟೆಸ್ಟ್ ಗೆಲುವು ದಾಖಲಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಬಾಂಗ್ಲಾದೇಶ ಈ ಗೌರವಕ್ಕೆ ಪಾತ್ರವಾಯಿತು.
ಟೆಸ್ಟ್ ಪಂದ್ಯ ಗೆಲ್ಲಲು 662 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನವು ಕೇವಲ 115 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು. 2019ರ ಟೆಸ್ಟ್ ಸೋಲಿನ ಸೇಡನ್ನು ಬಾಂಗ್ಲಾ ಭರ್ಜರಿಯಾಗಿ ತೀರಿಸಿಕೊಂಡಿತು.
ಬಾಂಗ್ಲಾದ ನಜ್ಮುಲ್ ಹುಸೇನ್ ಶಂಟೋ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್ ನಲ್ಲಿ 146 ರನ್ ಮಾಡಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ 124 ರನ್ ಬಾರಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಮೊಮಿನಲ್ ಹಕ್ 121 ರನ್ ಗಳಿಸಿದ್ದರು.
ನಜ್ಮುಲ್ ಹುಸೇನ್ ಶಂಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಬಾಂಗ್ಲಾ ಪ್ರವಾಸದಲ್ಲಿ ಅಫ್ಘಾನ್ ತಂಡವು ಮೂರು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಲಿದೆ