ಮುಂಬೈ: 2023ರ ಏಷ್ಯಾಕಪ್ ಕೂಟವು ಪಾಕಿಸ್ಥಾನ ಇಲ್ಲದೆ ನಡೆಯುವ ಸಾಧ್ಯತೆಯಿದೆ. ಮೂಲ ಆತಿಥ್ಯ ಹೊಂದಿದ್ದ ಪಾಕಿಸ್ಥಾನ ಹೇಳಿದ್ದ ಹೈಬ್ರಿಡ್ ಮಾದರಿಯನ್ನು ಒಪ್ಪಲು ಬಿಸಿಸಿಐ ತಯಾರಿಲ್ಲ. ಹೀಗಾಗಿ ಬಾಬರ್ ಪಡೆ ಇಲ್ಲದೆಯೂ ಏಷ್ಯಾ ಕಪ್ ನಡೆಸಲು ಮುಂದಾಗಿದೆ.
“ಪಾಕಿಸ್ತಾನ ಏಷ್ಯಾ ಕಪ್ ಗೆ ಆತಿಥ್ಯ ವಹಿಸುವ ಸಾಧ್ಯತೆ ಶೂನ್ಯವಾಗಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಸಹ ಸ್ಥಳಾಂತರಿಸಲು ನಾವು ಐಸಿಸಿಗೆ ಮನವಿ ಮಾಡುತ್ತೇವೆ. ಸದ್ಯಕ್ಕೆ ಶ್ರೀಲಂಕಾ ಟೂರ್ನಿಯ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಆದರೆ ಎಸಿಸಿ ಸಭೆಯಲ್ಲಿ ಮಾತ್ರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ.
ಸದ್ಯ ಏಷ್ಯಾಕಪ್ ಆತಿಥ್ಯವು ಪಾಕಿಸ್ತಾನದ ಕೈಯಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಬಿಸಿಸಿಐ ಸ್ಪಷ್ಟಪಡಿಸಿರುವಂತೆ, ಪಾಕಿಸ್ತಾನವು ಶ್ರೀಲಂಕಾದಲ್ಲಿ ಏಷ್ಯಾ ಕಪ್ ಆಡಲು ಒಪ್ಪಿಕೊಳ್ಳಬೇಕು ಅಥವಾ ಕೂಟದಲ್ಲಿ ಆಡದೇ ಇರಬೇಕು. ಇದರ ಹೊರತಾದ ಯಾವುದೇ ಆಯ್ಕೆ ಪಾಕಿಸ್ಥಾನಕ್ಕೆ ಉಳಿದಿಲ್ಲ.
ಏಷ್ಯಾ ಕಪ್ ಬಿಕ್ಕಟ್ಟು ಮುಂದುವರಿದರೆ ತ್ರಿಕೋನ ಸರಣಿಗಾಗಿ ಪಾಕಿಸ್ತಾನ ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯೊಂದಿಗೆ ಮಾತುಕತೆ ಆರಂಭಿಸಿದೆ.