Mysore
23
overcast clouds
Light
Dark

ಏಷ್ಯ ಕಪ್‌: ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ ಕಿಂಗ್‌ ಕೊಹ್ಲಿ

ಏಷ್ಯ ಕಪ್‌: ದುಬೈ ಇಂಟರ್​ನ್ಯಾಷನಲ್​ ಮೈದಾನದಲ್ಲಿ ಭಾನುವಾರ ನಡೆದ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ವಿಶೇಷ ಎಂದರೆ ಇದು ವಿರಾಟ್ ಕೊಹ್ಲಿ ಪಾಲಿನ 100ನೇ ಟಿ20 ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ ಕ್ರಿಕೆಟ್ ಇತಿಹಾಸ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದರೆ ಮೂರು ಮಾದರಿ ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನಾಡಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಟೀಮ್ ಇಂಡಿಯಾದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಅಂದರೆ 100 ಟೆಸ್ಟ್, 100 ಏಕದಿನ ಮತ್ತು 100 ಟಿ20 ಪಂದ್ಯವಾಡಿದ ಭಾರತದ ಮೊದಲ ಆಟಗಾರ ಹಾಗೂ ವಿಶ್ವದ ಎರಡನೇ ಕ್ರಿಕೆಟಿಗ ಎಂಬ ವಿಶ್ವ ದಾಖಲೆಯನ್ನು ಕೊಹ್ಲಿ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ನ್ಯೂಜಿಲೆಂಡ್​ನ ರಾಸ್ ಟೇಲರ್ ಮೂರು ಮಾದರಿಯಲ್ಲೂ 100 ಪಂದ್ಯಗಳನ್ನಾಡಿದ್ದರು. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಟೇಲರ್ 112 ಟೆಸ್ಟ್, 236 ಏಕದಿನ ಹಾಗೂ 102 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈ ಮೂಲಕ ಮೂರು ಮಾದರಿಯ ಕ್ರಿಕೆಟ್​ನಲ್ಲಿ 100 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು.

ಇದೀಗ ವಿರಾಟ್ ಕೊಹ್ಲಿ 100 ಟಿ20 ಪಂದ್ಯ, 262 ಏಕದಿನ ಹಾಗೂ 102 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ರಾಸ್ ಟೇಲರ್​ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇನ್ನು ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾ ಪರ 100 ಟಿ20 ಪಂದ್ಯವಾಡಿದ ಆಟಗಾರ ಎಂಬ ದಾಖಲೆಯನ್ನೂ ಕೂಡ ಕೊಹ್ಲಿ ಬರೆದಿದ್ದಾರೆ. ಭಾರತದ ಪರ ರೋಹಿತ್ ಶರ್ಮಾ 132 ಟಿ20 ಪಂದ್ಯಗಳನ್ನಾಡಿದ್ದಾರೆ. ಇದೀಗ ಕೊಹ್ಲಿ ನೂರು ಪಂದ್ಯಗಳಲ್ಲಿ ಕಣಕ್ಕಿಳಿದು ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ 100 ಟಿ20 ಪಂದ್ಯಗಳಲ್ಲಿ 92 ಇನಿಂಗ್ಸ್​ಗಳನ್ನು ಆಡಿರುವ ವಿರಾಟ್ ಕೊಹ್ಲಿ, 50 ಸರಾಸರಿಯಲ್ಲಿ 3343 ರನ್ ಕಲೆಹಾಕಿದ್ದಾರೆ. ಈ ವೇಳೆ 30 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪಾಕ್ ವಿರುದ್ದ ಕಣಕ್ಕಿಳಿಯುವ ಮೂಲಕ ಅಪರೂಪದ ವಿಶ್ವ ದಾಖಲೆಯನ್ನು ನಿರ್ಮಿಸುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಸೇರ್ಪಡೆಗೊಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ