Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಏಕದಿನ 2ನೇ ಪಂದ್ಯ: ಭಾರತ ತಂಡದಲ್ಲಿ ಎರಡು ಬದಲಾವಣೆ

ಆಕ್ಲೆಂಡ್‌: ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಧವನ್ ಪಡೆ ಇದೀಗ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾಕ್ಕೆ  ಈ ಮೈದಾನದ ಹಳೆಯ ಟ್ರ್ಯಾಕ್ ರೆಕಾರ್ಡ್​ ಇನ್ನಷ್ಟು ಆತಂಕ ಹೆಚ್ಚಿಸಿದೆ. ಟೀಂ ಇಂಡಿಯಾ ಇಲ್ಲಿ ಆಡಿರುವ 7 ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಜಯ ಸಾಧಿಸಿದೆ. ಇದರಿಂದಾಗಿ ನಾಳೆ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಲಿದೆಯೇ ಎಂಬ ಕುತೂಹಲ ಮೂಡಿದೆ. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಲು ಬಯಸಿದೆ.

ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿತ್ತಾದರೂ ಬೌಲಿಂಗ್ ವಿಭಾಗ ಅಟ್ಟರ್ ಫ್ಲಾಪ್ ಆಯಿತು. ಹೀಗಾಗಿ ಕಿವೀಸ್ ತಂಡ ನಿಗಧಿತ ಓವರ್​ಗಳಿಗಿಂತ ಮುಂಚೆಯೇ ಗುರಿ ಸಾಧಿಸಿತು. ಅದರಲ್ಲೂ ಪ್ರಮುಖ 3 ವಿಕೆಟ್​ಗಳನ್ನು ಬೇಗನೇ ಉರುಳಿಸದ ಭಾರತ ತಂಡಕ್ಕೆ ನಂತರ ಬಂದ ಕೇನ್ ವಿಲಿಯಮ್ಸನ್ ಹಾಗೂ ಲೇಥಮ್ ಸೋಲಿನ ಶಾಕ್ ನೀಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಈ ಜೋಡಿ ದಾಖಲೆಯ ದ್ವಿಶತಕದ ಜೊತೆಯಾಟ ಆಡಿತ್ತು.

ಇದರಲ್ಲಿ ಭಾರತದ ಬೌಲಿಂಗ್ ದಾಳಿಯಲ್ಲಿ ಆರನೇ ಬೌಲರ್ ಕೊರತೆ ಸ್ಪಷ್ಟವಾಗಿ ಕಂಡುಬಂದಿದೆ. ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಈ ಕೊರತೆಯನ್ನು ನೀಗಿಸುವ ಸಾಧ್ಯತೆಗಳಿದ್ದು, ಹೀಗಾಗಿ ತಂಡದಲ್ಲಿ ಬದಲಾವಣೆಯಾಗಲಿವೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಪಂತ್ ಮತ್ತು ಸ್ಯಾಮ್ಸನ್ ಈ ಇಬ್ಬರು ವಿಕೆಟ್‌ಕೀಪರ್‌ಗಳೊಂದಿಗೆ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಆಡಿತ್ತು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ 6ನೇ ಬೌಲಿಂಗ್ ಆಯ್ಕೆಯನ್ನು ಟೀಂ ಇಂಡಿಯಾ ಪರಿಗಣಿಸಿದರೆ​ ಈ ಇಬ್ಬರಲ್ಲಿ ಒಬ್ಬರು ಬೆಂಚ್ ಕಾಯುವುದು ಖಚಿತ.

ಈ ಇಬ್ಬರಲ್ಲಿ ಒಬ್ಬರು ತಂಡದಿಂದ ಹೊರನಡೆದರೆ ಅವರ ಜಾಗದಲ್ಲಿ ದೀಪಕ್ ಹೂಡಾ ಆಯ್ಕೆಯಾಗುವ ಸಾಧ್ಯತೆಗಳವು ಹೆಚ್ಚಿವೆ. ಏಕೆಂದರೆ ಹೂಡಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡಬಲ್ಲ ಆಟಗಾರ. ಅವರ ಆಫ್-ಸ್ಪಿನ್ ತಂಡಕ್ಕೆ ಉಪಯುಕ್ತವಾದರೆ, ಅವರು ಬ್ಯಾಟಿಂಗ್​ನಲ್ಲೂ ನಿರ್ಣಾಯಕ ಹಂತದಲ್ಲಿ ಸಹಕಾರಿಯಾಗಬಲ್ಲರು.

ಸ್ಪಿನ್ ವಿಭಾಗದ ಜವಬ್ದಾರಿ ಹೊತ್ತಿದ್ದ ಯುಜುವೇಂದ್ರ ಚಹಾಲ್ ಮೊದಲ ಏಕದಿನ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿದ್ದರು. ತಮ್ಮ 10 ಓವರ್‌ ಕೋಟಾದಲ್ಲಿ ಬರೋಬ್ಬರಿ 67 ರನ್ ನೀಡಿದ ಚಾಹಲ್​ಗೆ ಒಂದೇ ಒಂದು ವಿಕೆಟ್ ಸಹ ಬಿದ್ದಿರಲಿಲ್ಲ. ಹೀಗಾಗಿ ಅವರ ಜಾಗದಲ್ಲಿ ಕುಲದೀಪ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ