Mysore
21
light rain

Social Media

ಭಾನುವಾರ, 03 ನವೆಂಬರ್ 2024
Light
Dark

215 ಕಿ.ಮೀ. ವೇಗದಲ್ಲಿ ಲ್ಯಾಂಬೋರ್ಗಿನಿ ಕಾರು ಚಾಲನೆ: ರೋಹಿತ್ ಶರ್ಮಾಗೆ ದಂಡ

ಪುಣೆ : ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಲಯದಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿಗಳ ನಿದ್ದೆಗೆಡಿಸುತ್ತಿದ್ದಾರೆ. ಇದೀಗ ಅವರು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘಿಸಿ ವಿವಾದಕ್ಕೆ ಒಳಗಾಗಿದ್ದಾರೆ ಎಂದು ಪುಣೆ ಟೈಮ್ಸ್ ಮಿರರ್ ವರದಿ ಮಾಡಿದೆ.

ರೋಹಿತ್ ತಮ್ಮ ಲ್ಯಾಂಬೋರ್ಗಿನಿ ಕಾರನ್ನು ಪ್ರತಿ ಗಂಟೆಗೆ 215 ಕಿ.ಮೀ. ವೇಗದಲ್ಲಿ ಚಲಾಯಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ದಂಡದ ಮೂರು ರಶೀದಿಗಳನ್ನು ಆನ್‌ಲೈನ್ ಮೂಲಕ ಪೊಲೀಸರು ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ನಿರ್ದಿಷ್ಟವಾಗಿ ಯಾವ ದಿನ ರೋಹಿತ್ ಕಾರು ಚಲಾಯಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ರೋಹಿತ್ ಅವರ ಕಾರಿನ ವೇಗವು ಕೆಲವೊಮ್ಮೆ ಗಂಟೆಗೆ 215 ಕಿ.ಮೀ. ಅನ್ನು ಮುಟ್ಟಿದೆ ಎಂದು ಸಂಚಾರ ವಿಭಾಗದ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಪಂದ್ಯಾವಳಿಯು ನಡೆಯುತ್ತಿರುವಾಗ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಂಡದ ಬಸ್‌ನಲ್ಲಿ ರೋಹಿತ್ ಪ್ರಯಾಣಿಸಬೇಕಾಗಿತ್ತು ಎಂದು ವರದಿ ತಿಳಿಸಿದೆ.

ಅಕ್ಟೋಬರ್ 14ರಂದು ಅಹ್ಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡಿದ ನಂತರ ಭಾರತ ತಂಡ ಭಾನುವಾರವೇ ಪುಣೆ ನಗರಕ್ಕೆ ಬಂದಿಳಿದಿದೆ. ಸೋಮವಾರ ವಿಶ್ರಾಂತಿ ದಿನವಾಗಿದ್ದರಿಂದ ರೋಹಿತ್ ಅವರು ಬಹುಶಃ ಕುಟುಂಬದೊಂದಿಗೆ ಸಮಯ ಕಳೆಯಲು ಮುಂಬೈನಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಲಾಗಿದೆ.

ರೋಹಿತ್ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹಾಗೂ ಕಳವಳ ವ್ಯಕ್ತವಾಗಿದೆ. ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಯ ಸಂದರ್ಭಗಳಲ್ಲಿ ಟೀಮ್ ಇಂಡಿಯಾ ನಾಯಕ ಎಚ್ಚರಿಕೆಯಿಂದ ಇರಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

ಇಷ್ಟು ವೇಗದಲ್ಲಿ ವಾಹನ ಚಲಾಯಿಸಿ ನಿಮಗಷ್ಟೇ ಅಲ್ಲದೆ ನಿಮ್ಮ ಕುಟುಂಬದವರಿಗೂ ಸುತ್ತಮುತ್ತಲಿನವರಿಗೂ ಅನಗತ್ಯ ತೊಂದರೆ ಕೊಡುವುದೇಕೆ? ಜನಪ್ರಿಯ ವ್ಯಕ್ತಿಯಾಗಿ ಸಾರ್ವಜನಿಕರಿಗೆ ಮಾದರಿಯಾಗಿರಿ ಎಂದು ನೆಟ್ಟಿಗರೊಬ್ಬರು ರೋಹಿತ್‌ಗೆ ಕಿವಿ ಮಾತು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ