ಆರ್ .ಟಿ.ವಿಠ್ಠಲಮೂರ್ತಿ
ರಾಜಕೀಯ ಪಕ್ಷಗಳು ಭಾವನಾತ್ಮಕ ವಿಷಯಗಳನ್ನು ಬಿಟ್ಟು ಆತಂಕದ ಕೂಪಕ್ಕೆ ಬೀಳುತ್ತಿರುವ ಆರ್ಥಿಕತೆ ಬಗ್ಗೆ ಮಾತನಾಡುವ ನೈತಿಕತೆ ಮೆರೆಯಬೇಕು!
ಕರ್ನಾಟಕದಲ್ಲಿ ಗಣಿ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದು ನಿತಂ ಸಂದರ್ಭದಲ್ಲಿ ಇಬ್ಬರು ಗಣಿ ಉದ್ಯಮಿಗಳ ವೈಯಕ್ತಿಕ ಆಸ್ತಿಯ ಪ್ರಮಾಣ ಲಕ್ಷ ಕೋಟಿ ರೂಪಾಯಿಗಳನ್ನು ಮಿಕ್ಕಿತ್ತು. ಈ ಪೈಕಿ ಒಬ್ಬರು ಖಾಯಂ ಉದ್ಯಮಿಯಾದರೆ ಮತ್ತೊಬ್ಬರು ರಾಜಕೀಯದ ವರ್ತುಲದಲ್ಲಿದ್ದು ದುಡ್ಡು ಮಾಡಿದವರು. ಇವರು ಯಾವ ಹಂತಕ್ಕೆ ಹೋದರೆಂದರೆ ಮುಖ್ಯಮಂತ್ರಿಯಾದವರನ್ನೇ ಅಲುಗಾಡಿಸುವ ಶಕ್ತಿ ಇವರಿಗೆ ದಕ್ಕಿತ್ತು. ಅಷ್ಟೇ ಏಕೆ?ತಮಗೆ ಗಾಡ್ ಮದರ್ ಆಗಿದ್ದ ಕೇಂದ್ರದ ನಾಯಕಿಯೊಬ್ಬರನ್ನು ದೇಶದ ಪ್ರಧಾನಿ ಹುದ್ದೆಯ ಮೇಲೆ ಕೂರಿಸಬೇಕು ಎಂದು ನೀಲಿನಕ್ಷೆ ರೂಪಿಸುವ ಮಟ್ಟಕ್ಕೆ ಅವರ ಯೋಚನೆ ಬೆಳೆದಿತ್ತು. ಒಂದು ಸಂಸತ್ ಕ್ಷೇತ್ರಕ್ಕೆ ಇಪ್ಪತ್ತೈದು ಕೋಟಿ ರೂಪಾಯಿಗಳಂತೆ, ದೇಶದ ೫೪೪ ಸಂಸತ್ ಕ್ಷೇತ್ರಗಳ ಪೈಕಿ ಮುನ್ನೂರರಷ್ಟು ಕ್ಷೇತ್ರಗಳಿಗೆ ನಿಧಿ ರವಾನಿಸಿದರೆ ತಮ್ಮ ಕನಸು ಈಡೇರಬಹುದು ಎಂಬ ಲೆಕ್ಕಾಚಾರಕ್ಕೆ ಇವರು ಮುಂದಾಗಿದ್ದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ನಡೆಸುತ್ತಿರುವ ತಯಾರಿಯ ಭರದಲ್ಲಿ ಭಾರತದ ರಿಸರ್ವ್ ಬ್ಯಾಂಕ್ ನೀಡಿರುವ ಎಚ್ಚರಿಕೆಯ ಸಂದೇಶ ಯಾರ ಗಮನ ಸೆಳೆಯಲಿಲ್ಲ. ವರ್ಷದಿಂದ ವರ್ಷಕ್ಕೆ ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವ ಕರ್ನಾಟಕ ತ್ವರಿತವಾಗಿ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬುದು ರಿಸರ್ವ್ ಬ್ಯಾಂಕ್ ನೀಡಿದ ಎಚ್ಚರಿಕೆ.
ಹೀಗೆ ಅದು ಎಚ್ಚರಿಕೆ ನೀಡಲು ಕಾರಣವೂ ಇದೆ. ಮೊದಲನೆಯದಾಗಿ, ಈ ವರ್ಷದ ಆರ್ಥಿಕ ವರ್ಷ ಪೂರ್ಣಗೊಳ್ಳುವ ಕಾಲಕ್ಕೆ ಕರ್ನಾಟಕ ಸರ್ಕಾರದ ಹೆಗಲ ಮೇಲಿರುವ ಸಾಲದ ಮೊತ್ತ ಐದು ಲಕ್ಷ ಕೋಟಿ ರೂಪಾಯಿಗಳನ್ನು ದಾಟಲಿದೆ.
ಹೀಗೆ ತನ್ನ ಹೆಗಲ ಮೇಲಿರುವ ಸಾಲದ ಪ್ರಮಾಣ ಬೆಟ್ಟದಂತಿರುವ ಕಾರಣಕ್ಕಾಗಿ ಮುಂದಿನ ವರ್ಷದಿಂದ ಕರ್ನಾಟಕ ತನ್ನ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ತೀರಿಸಲು ವಾರ್ಷಿಕ ನಲವತ್ತು ಸಾವಿರ ಕೋಟಿ ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ.
ಆದರೆ ಇದು ಕೂಡಾ ಒಂದು ವರ್ಷದ ಮಾತು.ಯಾಕೆಂದರೆ ೨೦೨೩ ರ ಮಾರ್ಚ್ ಅಂತ್ಯದ ಹೊತ್ತಿಗೆ ಕರ್ನಾಟಕದ ಸಾಲದ ಪ್ರಮಾಣ ಐದು ಲಕ್ಷದ ಹದಿನೆಂಟು ಸಾವಿರ ಕೋಟಿ ರೂಪಾಯಿಗಳಾಗಿರುತ್ತದೆ. ಹೀಗಾಗಿ ೨೦೨೩-೨೪ ಆರ್ಥಿಕ ವರ್ಷದಲ್ಲಿ ಈ ಮೊತ್ತಕ್ಕೆ ಪೂರಕವಾದ ಅಸಲು ಮತ್ತು ಬಡ್ಡಿ ಕಂತಾಗಿ ರಾಜ್ಯ ಸರ್ಕಾರ ನಲವತ್ತು ಸಾವಿರ ಕೋಟಿ ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
ಆದರೆ ೨೦೨೩-೨೪ ನೇ ಸಾಲಿನ ಆರ್ಥಿಕ ವರ್ಷ ಪೂರ್ಣಗೊಂಡಾಗ ಸಾಲದ ಪ್ರಮಾಣ ಇಷ್ಟೇ ಇರುವುದಿಲ್ಲ. ಯಾಕೆಂದರೆ ೨೦೨೨-೨೩ ರ ಸಾಲಿನ ಬಜೆಟ್ ನಲ್ಲಿ ಸರ್ಕಾರವೇ ಹೇಳಿರುವ ಪ್ರಕಾರ, ಈ ವರ್ಷ ಎಪತ್ತೆರಡು ಸಾವಿರ ಕೋಟಿ ರೂಪಾಯಿ ಸಾಲ ಎತ್ತಲು ಅದು ನಿರ್ಧರಿರಿಸಿದೆ. ಈ ವರ್ಷದ ಅದರ ಆಯವ್ಯಯದ ಗಾತ್ರ ಸುಮಾರು ೨.೭೧ ಲಕ್ಷ ಕೋಟಿ ರೂಪಾಯಿ. ಮುಂದಿನ ವರ್ಷ ಅದು ತನ್ನ ಬಜೆಟ್ ಗಾತ್ರವನ್ನು ಹಿಗ್ಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದರ ಜತೆ ಜತೆಯಲ್ಲೇ ತಾನು ಮಾಡುವ ವಾರ್ಷಿಕ ಸಾಲದ ಪ್ರಮಾಣ ಎಂಭತ್ತು ಸಾವಿರ ಕೋಟಿ ರೂಪಾಯಿಗಳ ಗಡಿ ತಲುಪುವಂತೆ ಮಾಡುತ್ತದೆ.
ಅರ್ಥಾತ್, ಮುಂದಿನ ಆರ್ಥಿಕ ವರ್ಷ ಕಳೆದಾಗ ರಾಜ್ಯ ಸರ್ಕಾರದ ಮೇಲೆ ಹತ್ತತ್ತಿರ ಆರು ಲಕ್ಷ ಕೋಟಿ ರೂಪಾಯಿಗಳ ಸಾಲದ ಹೊರೆ ಇರುತ್ತದೆ. ಇಷ್ಟಾದ ಮೇಲೆ ಅದು ಕಟ್ಟುವ ವಾರ್ಷಿಕ ಅಸಲು, ಬಡ್ಡಿಯ ಕಂತಿನ ಪ್ರಮಾಣ ನಲವತ್‌ತೈದು ಸಾವಿರ ಕೋಟಿ ರೂಪಾಯಿಗಳ ಗಡಿ ತಲುಪುತ್ತದೆ.
ಅದು ಪ್ರತಿ ವರ್ಷ ತನ್ನ ಆಯವ್ಯಯದ ಶೇಕಡಾ ಹದಿನೈದಕ್ಕೂ ಹೆಚ್ಚು ಪ್ರಮಾಣದ ಹಣವನ್ನು ಸಾಲದ ಮೇಲಿನ ಅಸಲು ಮತ್ತು ಬಡ್ಡಿಗಾಗಿ ಪಾವತಿ ಮಾಡುತ್ತದೆ.
ಒಂದು ಆರ್ಥಿಕತೆ ಕುಸಿಯುತ್ತಾ ಸಾಗಿದೆ ಎನ್ನಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
ಅಂದ ಹಾಗೆ ರಾಷ್ಟ್ರದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ತೀರಾ ತಳ ಮಟ್ಟಕ್ಕೆ ಹೋಗಿಲ್ಲ ಎಂಬುದೇನೋ ಸರಿ. ಆದರೆ ತನ್ನ ಹೆಗಲ ಮೇಲೇರುತ್ತಿರುವ ಸಾಲದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಅದು ದಾರಿ ಕಂಡುಕೊಳ್ಳದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಕೈ ಮೀರುತ್ತದೆ.
ಪರಿಸ್ಥಿತಿ ಹೇಗೆ ಕೈ ಮೀರುತ್ತದೆ ಎಂಬುದನ್ನು ನೋಡಬೇಕೆಂದರೆ ರಾಜ್ಯ ಸರ್ಕಾರದ ಪ್ರಸಕ್ತ ನಡವಳಿಕೆಯನ್ನು ನೋಡಬೇಕು. ಅದು ಈಗಾಗಲೇ ತನ್ನ ವ್ಯಾಪ್ತಿಯಲ್ಲಿರುವ ವಿವಿಧ ನಿಗಮ ಮಂಡಳಿಗಳ ವ್ಯಾಪ್ತಿಯಲ್ಲಿರುವ ಆಸ್ತಿ-ಪಾಸ್ತಿಗಳ ವಿವರ ಪಡೆಯತೊಡಗಿದೆ.
ಸರ್ಕಾರದ ಬಹುತೇಕ ನಿಗಮ-ಮಂಡಳಿಗಳು ನಷ್ಟದಲ್ಲಿವೆ. ಆದರೂ ಬಹುತೇಕ ನಿಗಮ ಮಂಡಳಿಗಳ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯಿದೆ.ಇಂತಹ ಭೂಮಿಯ ವಿವರ ಪಡೆಯುವುದು ಎಂದರೆ ಭವಿಷ್ಯದಲ್ಲಿ ಅದನ್ನು ಮಾರಲು ಸರ್ಕಾರ ಸಜ್ಜಾಗುತ್ತಿದೆ ಎಂದೇ ಅರ್ಥ.
ಕೇಂದ್ರ ಸರ್ಕಾರ ಈಗಾಗಲೇ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಲ್ಲಿರುವ ತನ್ನ ಷೇರುಗಳನ್ನು ಕಡಿತಗೊಳಿಸಿ ಅವನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಜಾರಿಗೊಳಿಸಿದೆ.ಭವಿಷ್ಯದಲ್ಲಿ ಕರ್ನಾಟಕ ಕೂಡಾ ಇದೇ ಹಾದಿ ತುಳಿಯಲಿದೆ. ಇವತ್ತು ತನ್ನ ಹಿಡಿತದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಇರುವಾಗಲೇ ಹೆಗಲ ಮೇಲೆ ಬೆಟ್ಟದಂತೆ ಕುಳಿತಿರುವ ಸಾಲದ ಪ್ರಮಾಣವನ್ನು ಕಡಿಮೆ ಮಾಡುವ ಮಾರ್ಗೋಪಾಯಗಳು ಸರ್ಕಾರಕ್ಕೆ ಹೊಳೆಯುತ್ತಿಲ್ಲ.
ಇನ್ನು ಅದರ ಹಿಡಿತದಲ್ಲಿರುವ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಖಾಸಗಿಯವರ ಕೈಗೆ ಹೋದ ನಂತರ ಯಾವ ರೀತಿ ಹೊಳೆಯುತ್ತದೆ. ಕೈಯ್ಯಲ್ಲಿ ಆಸ್ತಿ ಪಾಸ್ತಿ ಇದ್ದಾಗ ಇರುವ ಸಾಲವನ್ನು ಕಡಿಮೆ ಮಾಡಿಕೊಳ್ಳುವ ಕೆಲಸ ಸುಲಭ. ಆದರೆ ಕೈಯ್ಯಲ್ಲಿ ಆಸ್ತಿ ಇಲ್ಲದೆ ಹೋದಾಗ ಸಾಲ ಕಡಿಮೆ ಮಾಡಿಕೊಳ್ಳುವುದು ಹಾಗಿರಲಿ, ಬಡ್ಡಿ ತೀರಿಸುವುದೂ ಕಷ್ಟದ ಕೆಲಸವಾಗಿ ರಾಜ್ಯದ ಜನ ಸಾಮಾನ್ಯರ ನೆತ್ತಿಯ ಮೇಲೆ ಸೈಜುಗಲ್ಲು ಕೂರಿಸುವುದು ಅನಿವಾರ್ಯವಾಗುತ್ತದೆ.
ತುಂಬ ದೂರ ಹೋಗುವುದೇನೂ ಬೇಡ. ಕೆಲವೇ ಕಾಲದ ಹಿಂದೆ ಕರ್ನಾಟಕದಲ್ಲಿ ಗಣಿ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿತ್ತು. ಆ ಸಂದರ್ಭದಲ್ಲಿ ಬೆಳೆದು ನಿಂತ ಇಬ್ಬರು ಗಣಿ ಉದ್ಯಮಿಗಳ ವೈಯಕ್ತಿಕ ಆಸ್ತಿಯ ಪ್ರಮಾಣ ಲಕ್ಷ ಕೋಟಿ ರೂಪಾಯಿಗಳನ್ನು ಮಿಕ್ಕಿತ್ತು.ಈ ಪೈಕಿ ಒಬ್ಬರು ಖಾಯಂ ಉದ್ಯಮಿಯಾದರೆ ಮತ್ತೊಬ್ಬರು ರಾಜಕೀಯದ ವರ್ತುಲದಲ್ಲಿದ್ದು ದುಡ್ಡು ಮಾಡಿದವರು. ಇವರು ಯಾವ ಹಂತಕ್ಕೆ ಹೋದರೆಂದರೆ ಮುಖ್ಯಮಂತ್ರಿಯಾದವರನ್ನೇ ಅಲುಗಾಡಿಸುವ ಶಕ್ತಿ ಇವರಿಗೆ ದಕ್ಕಿತ್ತು.
ಅಷ್ಟೇ ಏಕೆ?ತಮಗೆ ಗಾಡ್ ಮದರ್ ಆಗಿದ್ದ ಕೇಂದ್ರದ ನಾಯಕಿಯೊಬ್ಬರನ್ನು ದೇಶದ ಪ್ರಧಾನಿ ಹುದ್ದೆಯ ಮೇಲೆ ಕೂರಿಸಬೇಕು ಎಂದು ನೀಲಿನಕ್ಷೆ ರೂಪಿಸುವ ಮಟ್ಟಕ್ಕೆ ಅವರ ಯೋಚನೆ ಬೆಳೆದಿತ್ತು.
ಒಂದು ಸಂಸತ್ ಕ್ಷೇತ್ರಕ್ಕೆ ಇಪ್ಪತ್ತೈದು ಕೋಟಿ ರೂಪಾಯಿಗಳಂತೆ, ದೇಶದ ೫೪೪ ಸಂಸತ್ ಕ್ಷೇತ್ರಗಳ ಪೈಕಿ ಮುನ್ನೂರರಷ್ಟು ಕ್ಷೇತ್ರಗಳಿಗೆ ನಿಧಿ ರವಾನಿಸಿದರೆ ತಮ್ಮ ಕನಸು ಈಡೇರಬಹುದು ಎಂಬ ಲೆಕ್ಕಾಚಾರಕ್ಕೆ ಇವರು ಮುಂದಾಗಿದ್ದರು.
ಯಾವಾಗ ಇದು ಗೊತ್ತಾಯಿತೋ? ಆಗ ಅದೇ ಜಿಲ್ಲೆಯ ನಾಯಕರೊಬ್ಬರು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದವರ ಕಿವಿಗೆ ಈ ಮಾತು ಹಾಕಿದರು. ಆ ಮೂಲಕ ಇಂತಹ ತಂತ್ರಕ್ಕೆ ಹೊಡೆತ ಬಿತ್ತು. ಮುಂದೆ ಏನೇನಾಯಿತು? ಅನ್ನುವುದು ಇತಿಹಾಸ.
ಆದರೆ ಪ್ರಶ್ನೆ ಎಂದರೆ ಗಣಿ ಉದ್ಯಮದಲ್ಲಿ ನೆಲೆಯೂರಿ ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಮಿಕ್ಕಿದ ಹಣ ಸಂಪಾದನೆ ಮಾಡಬಹುದಾದರೆ ಇದು ರಾಜ್ಯ ಸರ್ಕಾರಕ್ಕೇಕೆ ಸಾಧ್ಯವಾಗಲಿಲ್ಲ? ಯಾಕೆ ಸಾಧ್ಯವಾಗಲಿಲ್ಲ ಎಂದರೆ ಈಗ ಅಸ್ತಿತ್ವಕ್ಕೆ ಬರುತ್ತಿರುವ ಸರ್ಕಾರಗಳಿಗೆ ಉತ್ತರದಾಯಿತ್ವ ಎಂಬುದೇ ಇಲ್ಲ. ಅಧಿಕಾರಕ್ಕೆ ಬಂದು ಕುಳಿತು ತಾನು ಮಾಡಿದ್ದೇನು? ಅಂತ ಹೇಳುವ ಜರೂರತ್ತು ಅವುಗಳಿಗಿಲ್ಲ. ಪರಿಣಾಮ? ಸರ್ಕಾರವನ್ನು ಬಳಸಿಕೊಂಡು ಖಾಸಗಿಯವರು ಬೆಳೆದು ನಿಲ್ಲಲು ಸಾಧ್ಯವೇ ಹೊರತು ಒಟ್ಟಾರೆ ರಾಜ್ಯದ ಬೆಳವಣಿಗೆ ಅನ್ನುವುದು ಅಸಾಧ್ಯ.
ಅದರ ಪರಿಣಾಮವೇ ಇಂದಿನ ಪರಿಸ್ಥಿತಿ. ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಲದ ಪ್ರಮಾಣ ಐದು ಲಕ್ಷದ ಹದಿನೆಂಟು ಸಾವಿರ ಕೋಟಿ ರೂಪಾಯಿಗಳಿಗೇರಲಿದೆ. ಈಗಲೇ ಅದಕ್ಕೆ ತನ್ನ ಹೆಗಲ ಮೇಲಿರುವ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗೋಪಾಯ ಗೊತ್ತಿಲ್ಲ.
ಇದರರ್ಥ, ಮುಂದಿನ ದಿನಗಳಲ್ಲಿ ಈ ಸಾಲದ ಪ್ರಮಾಣ ಹೆಚ್ಚುತ್ತಾ ಹೋಗಲಿದೆಯಷ್ಟೇ ಅಲ್ಲ, ರಾಜ್ಯ ದೊಡ್ಡ ಮಟ್ಟದ ಆರ್ಥಿಕ ಕುಸಿತಕ್ಕೆ ಸಿಲುಕುವ, ಪಾಪರ್ ಆಗುವ ಪರಿಸ್ಥಿತಿ ಎದುರಾಗುತ್ತದೆ. ಇವತ್ತು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಹಪಹಪಿಸುತ್ತಿರುವ ಎಲ್ಲ ರಾಜಕೀಯ ಪಕ್ಷಗಳು ಇಂತಹ ಗಂಭೀರ ವಿಷಯದ ಬಗ್ಗೆ ತಮ್ಮ ನಿಲುವುಗಳನ್ನೂ ವ್ಯಕ್ತಪಡಿಸಬೇಕು. ಕೇವಲ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಷ್ಟೇ ಅಲ್ಲ, ಆತಂಕದ ಕೂಪಕ್ಕೆ ಬೀಳುತ್ತಿರುವ ಆರ್ಥಿಕತೆಯ ಬಗ್ಗೆಯೂ ಮಾತನಾಡುವ ನೈತಿಕತೆಯನ್ನು ಅವು ತೋರಬೇಕು.
ಇದು ನಿಜವಾದ ನೈತಿಕತೆ!