Mysore
27
broken clouds
Light
Dark

ಪ್ರತಾಪ್‌ ಸಿಂಹ ಮುಗಿಸಲು ಹೊರಟ ಟರ್ಮಿನೇಟರ್‌ ಸಿನಿಮಾಗೆ ಸಿದ್ದರಾಮಣ್ಣನೇ ನಿರ್ದೇಶಕ: ಹೆಚ್‌ಡಿಕೆ

ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಇತ್ತೀಚೆಗಷ್ಟೆ ಅರಣ್ಯ ಇಲಾಖೆ ಮರ ಕಡಿದು ಸಾಗಿಸಿದ ಪ್ರಕರಣದಲ್ಲಿ ವಶಕ್ಕೆ ಪಡೆದಿತ್ತು. ಎಫ್‌ಐಆರ್‌ ಪ್ರತಿಯಲ್ಲಿ ತಮ್ಮ ಸೋದರನ ಹೆಸರಿಲ್ಲದಿದ್ದರೂ ವಶಕ್ಕೆ ಪಡೆದ ಪೊಲೀಸರ ವಿರುದ್ಧ ಪ್ರತಾಪ್‌ ಸಿಂಹ ಕಿಡಿಕಾರಿದ್ದರು. ಅಲ್ಲದೇ ಸುದ್ದಿಗೋಷ್ಠಿ ನಡೆಸಿದ್ದ ಜೆಡಿಎಸ್‌ನ ಕುಮಾರಸ್ವಾಮಿ ಸಹ ಇದನ್ನೇ ಹೇಳಿದ್ದರು. ಇದರ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂದು ಆರೋಪಿಸಿದ್ದರು. ಹೆಚ್‌ಡಿಕೆ ಹೇಳಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರು ಪ್ರತಿಕ್ರಿಯೆ ನೀಡಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಹೆಚ್‌ ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, ತನ್ನ ಬಗ್ಗೆ ಪ್ರತಿಕ್ರಿಯಿಸಿದವರ ವಿರುದ್ಧ ಖಾರವಾಗಿ ಬರೆದುಕೊಂಡಿದ್ದಾರೆ ಹಾಗೂ ವಿಕ್ರಂ ಸಿಂಹ ಬಂಧನವೆಲ್ಲಾ ಸಿದ್ದರಾಮಯ್ಯ ಬರೆದ ಕಥೆ ಎಂದು ವ್ಯಂಗ್ಯವಾಡಿದ್ದಾರೆ.

ತನ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌ ಹಾಗೂ ಕೆ ಎನ್‌ ರಾಜಣ್ಣ ಸಚಿವಗಿರಿ ಎಂದರೆ ಚಮಚಗಿರಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಸತ್ಯದ ಪರ ನಿಲ್ಲುವ ಗಂಡಸ್ತನ ನಿಮಗೆ ಇಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೇ ತಾನು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆಲ್ಲವೂ ಸತ್ಯ, ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ, ಆ ದಾಖಲೆಯನ್ನು ಎಲ್ಲಿಗೆ ತರಲಿ ಎಂದು ಬಹಿರಂಗ ಚರ್ಚೆಗೂ ಆಹ್ವಾನಿಸಿದ್ದಾರೆ.

ಕೊನೆಗೆ “ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಅದರ ಹಿಂದಿರುವ ಸಿದ್ಧಸೂತ್ರದಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ. ಇಡೀ ವಿಕ್ರಂಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದೇ. ಅವರೇ ಶ್ರೀಮನ್ ಸಿದ್ದರಾಮಣ್ಣ” ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ