ವಿಜಯಪುರ : ಸಿಎಂ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಹಾಸ್ಮೀಂ ಅವರ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ.
ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ಆರೋಪಿಸಿದ್ದ ಯತ್ನಾಳ್ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದು, ತನ್ವೀರ್ ಪೀರಾ ಹಾಸ್ಮೀಂ ಅವರು ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ತನ್ವೀರ್ ಪೀರಾ ಕೊಲೆ ಪ್ರಕರಣವೊಂದರಲ್ಲಿ ಆರೋಪಿತನಾಗಿದ್ದಾರೆ ಎಂದು ಹೇಳಿದ್ದು, ಕೊಲೆಯಾಗಿರುವ ವ್ಯಕ್ತಿಯ ಹೆಂಡತಿ ಸಾಕ್ಷ್ಯ ನಾಶ ಮಾಡುವುದಲ್ಲದೇ ನಮ್ಮ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಯತ್ನಾಳ್ ಅವರ ಆರೋಪದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಪ್ರತಿಕ್ರಿಯಿಸಿದ್ದ ತನ್ವೀರ್ ಹಾಸ್ಮೀಂ ಅವರು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರು ನನ್ನ ಮೇಲೆ ಮಾಡಿರುವ ಆರೋಪವನ್ನು ಒಂದು ವಾರದಲ್ಲಿ ಸಾಬೀತು ಮಾಡಿದರೆ ನಾನು ಈ ದೇಶವನ್ನೇ ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಒಂದು ವೇಳೆ ಆರೋಪ ಸಾಬೀತು ಮಾಡುವಲ್ಲಿ ವಿಫಲವಾದರೆ ಯತ್ನಾಳ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪಾಕಿಸ್ತಾನಕ್ಕೆ ಫಲಾಯನ ಮಾಡಬೇಕು ಎಂದು ಸವಾಲು ಹಾಕಿದ್ದರು.
ಯತ್ನಾಳ್ ಅವರು ನನಗೆ ಐಸಿಸ್ ಜೊತೆ ನಂಟಿದೆ ಎಂದು ಬಿಡುಗಡೆ ಮಾಡಿರುವ ಚಿತ್ರಗಳು ನನ್ನ ಅಧಿಕೃತ ಫೇಸ್ ಬುಕ್ ಖಾತೆಗೆ ನಾನೇ ಅಪ್ಲೋಡ್ ಮಾಡಿದ್ದೆ. ಸುಮಾರು 12 ವರ್ಷಗಳ ಹಿಂದೆ ನಾನು ಇರಾಖ್ ನ ಬಾಗ್ದಾದ್ ಗೆ ತೆರಳಿದ್ದೆ. ಆಗ ತೆಗೆದಿರುವ ಫೊಟೋಗಳು ಎಂದಿದ್ದರು.
ಇದೀಗ ಯತ್ನಾಳ್ ಅವರು ಮತ್ತೆ ತನ್ವೀರ್ ಹಾಸ್ಮೀಂ ಅವರ ವಿರುದ್ಧ ಹೊಸ ಆರೋಪ ಮಾಡಿದ್ದಾರೆ.