ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಶಾಸಕ ಸಂತೋಷ್ ಬಂಗಾರ್ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ʼಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿʼ ಎಂದು ಹೇಳಿಕೆ ನೀಡುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಹಿಂಗೋಳಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿದಾಗ ಮಕ್ಕಳನ್ನು ಉದ್ದೇಶಿಸಿ ಸಂತೋಷ್ ಬಂಗಾರ್ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೊ ವೀಕ್ಷಿಸಿದ ನೆಟ್ಟಿಗರು ಕಿಡಿಕಾರಿದ್ದಾರೆ. ʼನಿಮ್ಮ ಪೋಷಕರು ಏಕೆ ಊಟ ಮಾಡುತ್ತಿಲ್ಲ ಎಂದು ಕೇಳಿದರೆ ಸಂತೋಷ್ ಬಂಗಾರ್‌ಗೆ ಮತ ಹಾಕಿ, ಊಟ ಮಾಡುತ್ತೇವೆ ಎಂದು ಹೇಳಿʼ ಎಂದೂ ಸಹ ಹೇಳಿದ್ದಾರೆ.
ಅಲ್ಲದೇ ನಿಮ್ಮ ಅಪ್ಪ – ಅಮ್ಮ ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂದು ಮಕ್ಕಳಿಗೆ ಪ್ರಶ್ನೆ ಕೇಳಿರುವ ಸಂತೋಷ್ ಬಂಗಾರ್ ಮಕ್ಕಳಿಂದ ತಮ್ಮ ಹೆಸರನ್ನು ಹೇಳಿಸಿದ್ದಾರೆ. ಈ ವಿಡಿಯೊ ಶೇರ್ ಮಾಡಿರುವ ಕಾಂಗ್ರೆಸ್ ಹಾಗೂ ಎನ್‌ಸಿಪಿ – ಎಸ್‌ಪಿ ಪಕ್ಷದ ನಾಯಕರು ಸಂತೋಷ್ ಬಂಗಾರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.