ಭಾರತದಲ್ಲಿ ಭತ್ತದ ಬೇಸಾಯ ಕೃಷಿಯಷ್ಟೇ ಪುರಾತನವಾದುದು. ಮೊತ್ತ ಮೊದಲ ‘ಕಾಡು ಭತ್ತ’ದ ನಮೂನೆ ದೊರಕಿದ್ದು ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಬೇಲಾನ್ ನದಿ ಕಣಿವೆಯಲ್ಲಿ, ಸುಮಾರು ಕ್ರಿ. ಪೂ. 8000 -9000ದ ನಡುವೆ ಎನ್ನಲಾಗುತ್ತದೆ. ಆದರೆ, ಮೊತ್ತ ಮೊದಲ ಭತ್ತದ ‘ಪಳಗಿಸಿದ (ಡೊಮೆಸ್ಟಿಕೇಟೆಡ್) ನಮೂನೆ’ ದೊರಕಿದ್ದು ಚೀನಾದ ಯಾಂಗ್ಝೆ ನದಿ ಪ್ರದೇಶದಲ್ಲಿ, ಕ್ರಿ. ಪೂ.13500 ರಿಂದ 8200 ವರ್ಷಗಳ ಹಿಂದೆ. ಹರಪ್ಪಾ ನಾಗರಿಕತೆಯಲ್ಲಿ ಲೋಥಲ್ ಪ್ರದೇಶ ಭತ್ತದ ಕೃಷಿಗೆ ಹೆಸರು ಪಡೆದಿತ್ತು. 14ನೇ ಶತಮಾನದಲ್ಲಿ ಬದುಕಿದ್ದ, ವಿಜಯನಗರದ ಸಂಸ್ಕೃತ ಪಂಡಿತ ಸಾಯನ ವೇದಗಳ ಮೇಲಿನ ತನ್ನ ವ್ಯಾಖ್ಯಾನದಲ್ಲಿ ‘ತಾಂದುಲ್’ ಎಂಬ ಪದವನ್ನು ಬಳಸಿದ್ದಾನೆ. ಭತ್ತಕ್ಕೆ ಸಂಸ್ಕೃತ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ‘ತಾಂದೂಲ್’ ಎನ್ನುತ್ತಾರೆ. ರಾಮಾಯಣದಲ್ಲಿ ಭತ್ತದ ಬಗ್ಗೆ ಹಲವು ಉಲ್ಲೇಖಗಳಿವೆ. ಮಹಾಭಾರತದಲ್ಲಿ ಕೃಷ್ಣ ದ್ರೌಪದಿಗೆ ಯಾವತ್ತೂ ಅನ್ನ ನೀಡುವ ಅಕ್ಷಯ ಪಾತ್ರೆಯನ್ನು ಕೊಟ್ಟ ಕತೆಯಿದೆ.
ಇದೇ ರೀತಿಯಲ್ಲಿ ಬುದ್ಧನಿಗೆ ಸಂಬಂಧಿಸಿದ ಒಂದು ಭತ್ತದ ತಳಿಯಿರುವುದು ಸ್ವಾರಸ್ಯಕರ ವಿಚಾರ. ರಾಜಕುಮಾರ ಸಿದ್ಧಾರ್ಥ ಬುದ್ಧನಾಗಿ ಪರಿವರ್ತನೆಗೊಂಡ ನಂತರ ಒಂದು ದಿನ ತನ್ನ ತಂದೆಯ ರಾಜ್ಯ ಕಪಿಲವಸ್ತುವಿಗೆ ಮರಳುತ್ತಾನೆ. ದಾರಿಯಲ್ಲಿ ಬಜಹ ಅರಣ್ಯದ ಬಳಿಯ ಮತಲಾ ಗ್ರಾಮದ ಜನರು ಆಶೀರ್ವಾದ ಪಡೆಯಲು ಬುದ್ಧನ ಬಳಿ ಬರುತ್ತಾರೆ. ಆಗ ಬುದ್ಧ ತನಗೆ ಭಿಕ್ಷೆಯಾಗಿ ಸಿಕ್ಕ ಭತ್ತವನ್ನು ಅವರಿಗೆ ಕೊಟ್ಟು, ‘ಇದನ್ನು ಬಿತ್ತು, ಬೆಳೆಯಿರಿ. ಅದರ ಸುಗಂಧ ನಿಮಗೆ ಯಾವತ್ತೂ ನನ್ನನ್ನು ನೆನಪಿಸುತ್ತದೆ’ ಎಂದು ಹೇಳುತ್ತಾನೆ.
ಬುದ್ಧ ಹಾಗೆ ಆ ಜನಗಳಿಗೆ ಕೊಟ್ಟ ಭತ್ತದ ಹೆಸರು ಕಾಲಾನಮಕ್. ಕಾಲಾ ಅಂದರೆ ಹಿಂದಿಯಲ್ಲಿ ‘ಕಪ್ಪು’, ನಮಕ್ ಅಂದರೆ ‘ಉಪ್ಪು’ ಎಂದರ್ಥ. ಚಿಕ್ಕ ಗಾತ್ರದ ಇದರ ಹೊರ ಸಿಪ್ಪೆಯ ಬಣ್ಣ ಕಪ್ಪಗಿರುವುದರಿಂದ ಈ ಹೆಸರು. ಅದರ ಪರಿಮಳಕ್ಕೆ ಕಾಡೊಳಗಿನ ಜಿಂಕೆಗಳು ನಾಡೊಳಕ್ಕೆ ಬರುತ್ತಿದ್ದವಂತೆ. ಬುದ್ಧನ ಕೈಯಿಂದ ಬಂತು ಎಂಬ ಕಾರಣಕ್ಕೆ ಅದನ್ನು ‘ಬುದ್ಧನ ಭತ್ತ’ ಎಂದು ಕರೆಯುತ್ತಾರೆ. ಇನ್ನೂ ಒಂದು ಸ್ವಾರಸ್ಯಕರ ವಿಚಾರವೆಂದರೆ, ಬುದ್ಧನ ತಂದೆಯ ‘ಶುದ್ಧೋಧನ’ ಎಂಬ ಹೆಸರಿನ ಅರ್ಥ ‘ಶುದ್ಧ ಭತ್ತವನ್ನು ಬೆಳೆಯುವವನು’.
ಮುಂದಿನ ಮೂರು ಶತಮಾನಗಳಲ್ಲಿ ನೇಪಾಳದಲ್ಲಿ ಬಜಹ ಕಾಡೂ ಕಾಣೆಯಾಯಿತು, ಮತಲಾ ಗ್ರಾಮವೂ ಕಣ್ಮರೆಯಾಯಿತು. ಹಾಗೆಯೇ, ಬುದ್ಧನ ಭತ್ತವೂ ಇಲ್ಲವಾಯಿತು. ಆದರೆ, ಕೆಲವು ವ್ಯಕ್ತಿಗಳು, ಕೃಷಿ ವಿಜ್ಞಾನಿಗಳು ಮತ್ತು ಉತ್ತರಪ್ರದೇಶ ಸರ್ಕಾರದ ಪ್ರಯತ್ನದ ಫಲವಾಗಿ ಕಳೆದ ಎರಡು ದಶಕಗಳಲ್ಲಿ ಕಾಲಾನಮಕ್ ಭತ್ತದ ತಳಿಯು ಪುನರ್ಜೀವ ಪಡೆದಿದೆ. ಉತ್ತರಪ್ರದೇಶದ ೭೫ ಜಿಲ್ಲೆಗಳಲ್ಲೊಂದಾದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಕಾಲಾನಮಕ್ ಕೃಷಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ೨೦೧೩ರಲ್ಲಿ ಇದಕ್ಕೆ ‘ಜಿಐ (ಜಿಯೋಗ್ರಾಫಿಕಲ್ ಇಂಡಿಕೇಶನ್)’ ಟ್ಯಾಗ್ ಕೂಡ ಲಭಿಸಿತು. ಈಗ ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಮಾರಾಟವಾಗುತ್ತಿದೆ.
ವಾಸ್ತವದಲ್ಲಿ, ‘ಏಷಿಯನ್ ಆಗ್ರಿ ಹಿಸ್ಟರಿ ಫೌಂಡೇಷನ್’ ಪ್ರಕಾರ, ಮೊತ್ತ ಮೊದಲ ಬಾರಿಗೆ ಕಾಲಾನಮಕ್ ಭತ್ತದ ಪುನರುಜ್ಜೀಕರಣ ಪ್ರಯತ್ನಗಳನ್ನು ನಡೆಸಿದವರು ಬ್ರಿಟಿಷರು. ಅವರಿಗೆ ಕೆಲವು ಭಾರತೀಯ ಜಮೀನ್ದಾರರು ಈ ಪ್ರಯತ್ನದಲ್ಲಿ ಸಹಕಾರ ನೀಡಿದ್ದರು. ಬಿರ್ದ್‌ಪುರ, ಅಲಿದಪುರ, ಗೋರಖ್ ಪುರ್, ಬಸ್ತಿ ಮತ್ತು ಮೋಹನ ಎಂಬಲ್ಲಿನ ಸ್ಥಳೀಯ ಕೃಷಿಕರು ಬ್ರಿಟಿಷರು ಕಾಲಾನಮಕ್ ಭತ್ತದ ಗದ್ದೆಗಳಿಗೆ ವರ್ಷವಿಡೀ ನೀರುಣಿಸಲು ತೋಡಿದ್ದ ಕಾಲುವೆಗಳ ಕುರುಹುಗಳನ್ನು ತೋರಿಸುತ್ತಾರೆ. ಹಲವು ಬ್ರಿಟಿಷ್ ಅಧಿಕಾರಿಗಳು ಕುದುರೆಗಳ ಮೇಲೆ ಕುಳಿತು ತಿರುಗಿ ಕಾಲುವೆಗಳ ನೀರು ಎಲ್ಲಾ ಭತ್ತದ ಗದ್ದೆಗಳಿಗೆ ಸೂಕ್ತವಾಗಿ ಲಭಿಸುವುದನ್ನು ಖಾತರಿ ಮಾಡಿಕೊಳ್ಳುತ್ತಿದ್ದರು. ಆದರೆ, ಇದೇ ಕಾಲಾನಮಕ್ ಭತ್ತ ನಂತರದ ದಿನಗಳಲ್ಲಿ ಬ್ರಿಟಿಷರ ದಬ್ಬಾಳಿಕೆಗೂ ಕಾರಣವಾಯಿತು. ಚಂಪಾರಣ್ಯದಲ್ಲಿ ರೈತರು ಕಡ್ಡಾಯವಾಗಿ ಇಂಡಿಗೋ ಬೆಳೆಯಲು ದಬ್ಬಾಳಿಕೆ ನಡೆಸಿದಂತೆಯೇ ಬ್ರಿಟಿಷರು ಕಾಲಾನಮಕ್ ಭತ್ತ ಬೆಳೆಯಲು ರೈತರನ್ನು ಬಲವಂತ ಮಾಡುವುದು ಶುರುವಾಯಿತು. ರೈತರು ಕಾಲಾನಮಕ್ ಬೆಳೆಯಲು ನಿರಾಕರಿಸಲು ಆಸ್ಪದವೇ ಇಲ್ಲದಂತಾಯಿತು. ಹಾಗಾಗಿ ಬರಬರುತ್ತ ಕಾಲಾನಮಕ್ ಭತ್ತ ಆ ರೈತರಿಗೆ ಗುಲಾಮಗಿರಿಯ ಸಂಕೇತವಾಯಿತು. ಹೀಗೆ, ಬುದ್ಧ ಆಶೀರ್ವದಿಸಿ ಕೊಟ್ಟ ಭತ್ತ ಕೊನೆಗೆ ದೌರ್ಜನ್ಯಕ್ಕೆ ಹೇತುವಾಯಿತು. ಆ ಸಮಯದಲ್ಲಿ ರೈತ ಮಕ್ಕಳು ಹಾಡುತ್ತಿದ್ದ ಒಂದು ಕಿರು ಹಾಡು ರೈತರ ಕಾಲಾನಮಕ್ ಗುಲಾಮಿತನದ ದಿನಗಳನ್ನು ಬಹಳ ಚೆನ್ನಾಗಿ ಸೂಚಿಸುತ್ತದೆ-
‘ಓಲೀ ಸಾಹೇಬ್ ಗೋಲಿ ಖೇಲೇ
ಪೆಪ್ಪೆ ಸಾಹೇಬ್ ಪಯ್ಯಾ
ಖೇಡ್ ಖೇಡ್ ಮುಸರ್ವಾ ಕೇ ಮಾರೇ
ದೇಖ್ ತಮಾಷಾ ಭಯ್ಯಾ’
(ಓಲಿವರ್ ಸಾಹೇಬ ಗಾಲ್ಛ್ ಆಡುತ್ತಾನೆ ಪೆಪ್ಪೆ ಸಾಹೇಬ ಭತ್ತದ ಗುಣಮಟ್ಟ ನೋಡುತ್ತಾನೆ ಅವನೂ ರೈತರಿಗೆ ಹೊಡೆಯುತ್ತಾನೆ ಇವನೂ ರೈತರಿಗೆ ಹೊಡೆಯುತ್ತಾನೆ ಎಂತಹ ತಮಾಷೆ ನೋಡೋ ಅಣ್ಣಾ)
ಕಾಲಾನಮಕ್ ಭತ್ತವನ್ನು ಬೆಳೆಯುವುದು ಸುಲಭದ ಕೆಲಸವಲ್ಲ. ಇದಕ್ಕೆ ಜೌಗು ಪ್ರದೇಶ ಬೇಕು. ಗಿಡ ಆರು ಅಡಿ ಎತ್ತರಕ್ಕೆ ಬೆಳೆಯುವುದರಿಂದ ಸಹಜವಾಗಿಯೇ ಬಾಗುತ್ತದೆ. ಅದರಿಂದಾಗಿ ಇಳುವರಿಯೂ ಬಹಳ ಕಡಿಮೆ. ಗೋಸ್ವಾ ಗ್ರಾಮದ ಫೂಲ್‌ಚಂದ್ ಎನ್ನುವ ಒಬ್ಬರು ರೈತರು ಪರಿಮಳದಲ್ಲಿ ಮೂಲ ಕಾಲಾನಮಕ್ ಭತ್ತಕ್ಕೆ ಅತಿ ಸಮೀಪವಿರುವ ತಳಿಯೊಂದನ್ನು ಅಭಿವೃದ್ಧಿ ಪಡಿಸಿ ಬೆಳೆಯುತ್ತಿದ್ದಾರೆ. ಇವರ ವಂಶಜರು ತಲೆಮಾರುಗಳಿಂದ ಕಾಲಾನಮಕ್ ಭತ್ತದ ಕೃಷಿ ಮಾಡುತ್ತ ಬಂದವರು. ಅವರು ತಾವೇ ಬೆಳೆದ ಭತ್ತದ ಬೀಜಗಳಿಂದ ಸಸಿಗಳನ್ನು ಮಾಡುತ್ತಿದ್ದದ್ದರಿಂದ ಇದರ ಮೂಲ ಸ್ವರೂಪ ಹೆಚ್ಚು ಬದಲಾಗಿಲ್ಲ ಮತ್ತು ವಂಶವಾಹಿನಿಯಲ್ಲಿ ಯಾವುದೇ ಕಲಬೆರಕೆಯಾಗಿಲ್ಲ.
ಹೊತ್ತಿಗೆ ಉತ್ತರ ಪ್ರದೇಶದ ಗೋರಕ್‌ಪುರ್, ಬಸ್ತಿ, ಗೊಂಡಾ, ಮೇಹರ್‌ಗಂಜ್, ಸಂತ್ ಕಬಿರ್‌ನಗರ್, ಸಿದ್ಧಾರ್ಥನಗರ್, ಬೆಹರಿಚ್, ಶ್ರಾವಸ್ತಿ ಮೊದಲಾಗಿ ಹನ್ನೊಂದು ಜಿಲ್ಲೆಗಳಲ್ಲಿ ೮೦,೦೦೦ ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಕಾಲಾನಮಕ್ ಭತ್ತವನ್ನು ಬೆಳೆಯಲಾಗಿದೆ. ಬುದ್ಧನ ಬದುಕಿನೊಂದಿಗೆ ತಳಕು ಹಾಕಿಕೊಂಡಿರುವ ಕಾರಣಕ್ಕೆ, ಕಾಲಾನಮಕ್ ಭತ್ತದಿಂದ ತಯಾರಿಸಿದ ಅಕ್ಕಿಯನ್ನು ಈಗ ‘ಬುದ್ಧ ಹೋಮ್ ರೈಸ್’ ಎಂಬ ಬ್ರ್ಯಾಂಡ್ ಹೆಸರಲ್ಲಿ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಜಪಾನ್, ಕಾಂಬೋಡಿಯಾ ಸೇರಿ ಹಲವು ಬೌದ್ಧ ದೇಶಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗೆ, ಕಾಲಾನಮಕ್ ಭತ್ತ ತಾನು ಹೋದಲ್ಲೆಲ್ಲ ಬುದ್ಧನ ಪರಿಮಳವನ್ನು ಹರಡುತ್ತಿದೆ.





