Mysore
16
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದೇಶ ವಿಭಜನೆ ಸಂತ್ರಸ್ಥರಿಗೆ ಮಿಡಿಯುವ ಪಾಕಿಸ್ತಾನಿ ಹೃದಯ

೨೦೨೨ರಲ್ಲಿ ೯೩ ವರ್ಷ ಪ್ರಾಯವಾಗಿದ್ದ ಮಹಾರಾಷ್ಟ್ರದ ಪುಣೆ ನಿವಾಸಿ ರೀನಾ ಚಿಬ್ಬರ್ ವರ್ಮಾ(ಎಡಗಡೆಯಲ್ಲಿರುವವರು)ರಿಗೆ ಕೊನೆಯ ಆಸೆಯೊಂದಿತ್ತು. ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯ ಪ್ರೇಮ್ ಗಲ್ಲಿ ರಸ್ತೆಯಲ್ಲಿ ತಮ್ಮ ಕುಟುಂಬ ಬಿಟ್ಟು ಬಂದಿದ್ದ ತಮ್ಮ ಮನೆಯನ್ನೊಮ್ಮೆ ನೋಡುವುದು. ಪ್ರೇಮ್ ಗಲ್ಲಿ ಎಂಬುದು ಅವರ ತಂದೆ ಭಾಯ್ ಪ್ರೇಮ್ ಚಂದ್ ಚಿಬ್ಬರ್‌ರ ಗೌರವಾರ್ಥ ಹೆಸರಿಸಲ್ಪಟ್ಟ ರಸ್ತೆ. (ಇಂದಿಗೂ ಆ ರಸ್ತೆಗೆ ಇದೇ ಹೆಸರಿದೆ). ಅವರ ತಂದೆ ತಾಯಿ ತೀರಿಕೊಂಡು ಬಹಳ ವರ್ಷಗಳಾದವು. ಮಗನೂ ತೀರಿಕೊಂಡನು. ಮಗಳು ಸೋನಾಲಿ ತನ್ನ ಸಂಸಾರದೊಂದಿಗೆ ಗುರ್ಗಾಂವ್‌ನಲ್ಲಿದ್ದು, ರೀನಾ ವರ್ಮಾ ಪುಣೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದರು. ಅವರು ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಲು ಪ್ರಯತ್ನಿಸಿದರೂ ಬೇರೆ ಬೇರೆ ಕಾರಣಗಳಿಂದಾಗಿ ಅವರಿಗೆ ವೀಸಾ ಸಿಕ್ಕಿರಲಿಲ್ಲ. ನಂತರ, ಹಲವರು ಸಹಾಯ ಮಾಡಿದ ಮೇರೆಗೆ, ೨೦೨೨ರ ಜುಲೈಯಲ್ಲಿ ಅವರು ಪಾಕಿ ಸ್ತಾನಕ್ಕೆ ಹೋಗುವಲ್ಲಿ ಯಶಸ್ವಿಯಾದರು. ರೀನಾ ವರ್ಮಾರಿಗೆ ಹಾಗೆ ಸಹಾಯ ಮಾಡಿದವರಲ್ಲಿ ಒಬ್ಬರು ಪಾಕಿಸ್ತಾನದ ಲಾಹೋರ್ ನಿವಾಸಿ ನೊಶಾಬಾ ಶೆಹಝಾದ್ ಎಂಬ ೪೯ ವರ್ಷ ಪ್ರಾಯದ ಒಬ್ಬರು ಮಹಿಳಾ ಉದ್ಯಮಿ.

ಪಾಕಿಸ್ತಾನದ ಚಾಕ್ವಾಲ್ ಜಿಲ್ಲೆಯ ತಾಲಾಗಾಂಗ್ ಎಂಬ ನಗರದಲ್ಲಿ ಹುಟ್ಟಿ ಬೆಳೆದ ನೊಶಾಬಾ ಶೆಹ ಝಾದ್‌ರ ಕುಟುಂಬ ಕೆಲವು ವರ್ಷಗಳ ಕಾಲ ವಿಭಜನೆಯ ಸಮಯದಲ್ಲಿ ಹಿಂದೂ ಕುಟುಂಬ ವೊಂದು ಬಿಟ್ಟು ಹೋದ ಮನೆಯಲ್ಲಿ ವಾಸವಾಗಿತ್ತು. ತನ್ನ ೯೦ನೇ ವರ್ಷ ಪ್ರಾಯದಲ್ಲಿ ತೀರಿಕೊಂಡ ನೊಶಾಬಾ ಶೆಹಝಾದ್‌ರ ತಂದೆ ಆಕೆಗೆ ದೇಶ ವಿಭಜನೆಯ ದುರಂತದ ಕತೆಗಳನ್ನು ಹೇಳುತ್ತಿದ್ದರು. ಆ ಕತೆಗಳನ್ನು ಹೇಳುವಾಗ ಅವರು ಶಕುಂತಲಾ ಎಂಬ ತಮ್ಮ ನೆರೆಮನೆಯ ೧೬ ವರ್ಷ ಪ್ರಾಯದ ಮಹಿಳೆ ಯೊಬ್ಬಳನ್ನು ಯಾವತ್ತೂ ನೆನಪಿಸಿಕೊಳ್ಳುತ್ತಿದ್ದರು. ದೇಶ ವಿಭಜನೆಯಾಗಿ, ದಂಗೆಗಳು ಎದ್ದಾಗ ಜೀವ ಭಯದಿಂದ ಮೂರು ದಿನಗಳ ಕಾಲ ಅವರ ಮನೆಯಲ್ಲಿ ಅಡಗಿ ಆಶ್ರಯ ಪಡೆದಿದ್ದ ಶಕುಂತಲಾ ಅವರ ಮನೆ ಬಿಟ್ಟು ಹೋಗಲು ಒಪ್ಪುತ್ತಿರಲಿಲ್ಲ. ಆದರೆ, ಹಾಗೆ ಆಕೆಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಆಗ ಕಾನೂನು ಬಾಹಿರವಾಗಿತ್ತು. ನಂತರ, ಬೇರೆ ದಾರಿಯಿ ಲ್ಲದೆ ಒತ್ತಾಯದಿಂದ ಶಕುಂತಲಾಳನ್ನು ನಿರಾಶ್ರಿತರ ಕ್ಯಾಂಪಿಗೆ ಸಾಗಿಸಬೇಕಾಯಿತು. ಹಾಗೆ ಆಕೆಯನ್ನು ಸಾಗಿಸುವಾಗ ಎರಡೂ ಕುಟುಂಬದವರು ಕಣ್ಣೀರು ಹಾಕಿದರು.

ವರ್ಷಗಳು ಕಳೆದವು. ನೊಶಾಬಾ ಶೆಹಝಾದ್ ಇಸ್ಲಾಮಾಬಾದಿನಲ್ಲಿ ಮದುವೆಯಾಗಿ, ಮುಂದೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಒಬ್ಬರು ಯಶಸ್ವಿ ಉದ್ಯಮಿಯಾದರು. ಆದರೆ, ತನ್ನ ತಂದೆ ಹೇಳುತ್ತಿದ್ದ ೧೯೪೭ರ ದೇಶ ವಿಭಜನೆಯ ಕರಾಳ ಕತೆಗಳು ಅವರನ್ನು ಕಾಡುತ್ತಿದ್ದವು. ನೊಶಾಬಾ ಕೃಷಿ ಅಧ್ಯಯನಕ್ಕಾಗಿ ಹಲವು ವಿದೇಶಿ ವಿಶ್ವವಿದ್ಯಾಲಯಗಳನ್ನು ಸುತ್ತುವಾಗ ಅವರಿಗೆ ಭಾರತೀಯ ಮೂಲದ ಹಲವರು ಪರಿಚಿತರಾದರು. ಅವರಲ್ಲಿ ಹೆಚ್ಚಿನವರು ಸಿಖ್ ಜನಾಂಗದವರು. ಅವರೆಲ್ಲರೂ ದೇಶ ವಿಭಜನೆಯ ತಮ್ಮ ಕುಟುಂಬಗಳ ಭೀಕರ ನೆನಪುಗಳನ್ನು ನೊಶಾಬಾರೊಂದಿಗೆ ಹಂಚಿಕೊಳ್ಳುತ್ತಿದ್ದರು.

‘ಲಾಹೋರ್ ಸಿಖ್ ಧರ್ಮದ ತೊಟ್ಟಿಲು. ವಿಭಜನೆಯ ಸಮಯದಲ್ಲಿ ಸಿಖ್ಖರು ತೊರೆದು ಹೋದ ತಮ್ಮ ಭವ್ಯ ಬಂಗಲೆಗಳ ಅವಶೇಷಗಳನ್ನು ಅಲ್ಲಿ ಈಗಲೂ ಕಾಣಬಹುದು. ಈಗ ಹಾಳು ಬಿದ್ದ ಆ ಮನೆಗಳಿಂದ ಉದುರುವ ಒಂದೊಂದು ಇಟ್ಟಿಗೆಯೂ ಒಂದೊಂದು ನೋವಿನ ಕತೆಯನ್ನು ಹೇಳುತ್ತದೆ.
ಪ್ರತೀ ಬಾರಿ ಅವುಗಳನ್ನು ನೋಡಿದಾಗ ಆ ಕುಟುಂಬಗಳಿಗೆ ಸೇರಿದ ಜನ ಅವುಗಳನ್ನು ಒಮ್ಮೆಯಾದರೂ ಕಣ್ಣಾರೆ ನೋಡಬೇಕೆಂದು ಎಷ್ಟು ಕಳವಳಿಸುತ್ತಾರೋ ಎಂದು ಆಲೊಚಿಸಿ ಮನಸ್ಸು ಮುದುಡುತ್ತದೆ’ ಎಂದು ಹೇಳುವ ನೊಶಾಬಾ, ೨೦೧೮ರಲ್ಲಿ ತನ್ನ ಗಂಡನ ಊರಾದ ಲಾಹೋರಿಗೆ ಮರಳಿದ ನಂತರ ಅಂತಹವರಿಗೆ ಪಾಕಿಸ್ತಾನಕ್ಕೆ ಬರಲು ವೀಸಾ ಕೊಡಿಸಲು ತನ್ನ ಕೈಲಾದುದನ್ನು ಮಾಡುತ್ತಿದ್ದಾರೆ.

ಮುಂದೆ ನೊಶಾಬಾ ಪಾಕಿಸ್ತಾನದಲ್ಲಿ ಹಲವರು ಸಮಾನ ಮನಸ್ಕರನ್ನು ಭೇಟಿಯಾಗಿ, ‘ಇಂಡಿಯಾ-ಪಾಕಿಸ್ತಾನ್ ಹೆರಿಟೇಜ್ ಕ್ಲಬ್’ ಎಂಬ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾದರು. ಆ ಗ್ರೂಪಲ್ಲಿ ಭಾರತ ಮತ್ತು ಪಾಕಿಸ್ತಾನದ ೧. ೫೦ ಲಕ್ಷಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ. ನೊಶಾಬಾ ಆ ಗ್ರೂಪಲ್ಲಿ ಇಂಟರಾಕ್ಟ್ ಮಾಡುವಾಗ ಅವರಿಗೆ ದೇಶ ವಿಭಜನೆಯಲ್ಲಿ ಸಂತ್ರಸ್ತವಾದ ಎಷ್ಟೊಂದು ಕುಟುಂಬಗಳ ಎಷ್ಟೊಂದು ಜನ ಪಾಕಿಸ್ತಾನಕ್ಕೆ ಬರಲು ಹಾತೊರೆ ಯುತ್ತಿದ್ದಾರೆ ಎಂಬುದು ನೇರವಾಗಿ ಅನುಭವಕ್ಕೆ ಬರತೊಡಗಿತು. ಕಾರ್ತಾರ್ ಪುರ್ ಕಾರಿಡಾರಿನಲ್ಲಿ ಅವರು ಭಾರತದಿಂದ ಬರುವ ಹಲವಾರು ಯಾತ್ರಿಗಳನ್ನು ಮುಖತಃ ಭೇಟಿಯಾಗುತ್ತಿದ್ದರು. ಅವರಲ್ಲಿ ಅನೇಕ ಹಿರಿಯರು ತಮ್ಮನ್ನು ತಮ್ಮ ಪೂರ್ವಜರ ಮನೆಗೆ ಕರೆದುಕೊಂಡು ಹೋಗುವಂತೆ ನೊಶಾಬಾರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದರು. ನೊಶಾಬಾ ಅವರಲ್ಲಿ ತನಗೆ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ಪಾಕಿಸ್ತಾನಕ್ಕೆ ಬರಲು ಸಹಾಯ ಮಾಡುತ್ತಿದ್ದಾರೆ.

ರೀನಾ ಚಿಬ್ಬರ್ ವರ್ಮಾ ತಾನು ಹುಟ್ಟಿ ಬೆಳೆದ ರಾವಲ್ಪಿಂಡಿಯ ಮನೆ ತಲುಪಿದಾಗ ಇಡೀ ಪ್ರೇಮ್ ಗಲ್ಲಿ ನೆರೆದು ಅವರನ್ನು ಸ್ವಾಗತಿಸಿ, ಸಂಭ್ರಮಿಸಿತು. ಈಗ ಆ ಮನೆಯಲ್ಲಿ ವಾಸವಾಗಿರುವ ಪಾಕಿಸ್ತಾನಿ ಮುಸ್ಲಿಂ ಕುಟುಂಬ ಅವರಿಗೆ ಆ ರಾತ್ರಿ ಉಳಿದುಕೊಳ್ಳಲು ಒಂದು ಕೋಣೆಯನ್ನು ಬಿಟ್ಟುಕೊಟ್ಟಿತು. ಕಾಕತಾಳೀಯ ಎಂಬಂತೆ ಆ ಕೋಣೆ ೭೫ ವರ್ಷಗಳ ಹಿಂದೆ ರೀನಾ ತಮ್ಮ ಬಾಲ್ಯದಲ್ಲಿ ಉಳಿದುಕೊಳ್ಳುತ್ತಿದ್ದ ಕೋಣೆಯಾಗಿತ್ತು! ರೀನಾ ವರ್ಮಾ ರಾತಿಯಿಡೀ ಎಚ್ಚರವಿದ್ದು ಕೋಣೆಯ ಗೋಡೆಗಳನ್ನು ಮುಟ್ಟಿ, ತನ್ನ ಬಾಲ್ಯದ ಹಾಡುಗಳನ್ನು ಗುಣುಗಿ, ಕೋಣೆಯೊಳಗಿನ ಗಾಳಿಯನ್ನು ಆಸ್ವಾದಿಸಿ, ತಾನು ಅಲ್ಲಿ ಕಳೆದ ದಿನಗಳ ಮೆಲುಕು ಹಾಕಿದರು. ಇನ್ನೊಮ್ಮೆ ತಾನು ಆ ಮನೆಗೆ ಬರಲಾರೆ ಎಂಬುದು ಅವರಿಗೆ ಗೊತ್ತಿತ್ತು.

ನೊಶಾಬಾ, ಪಾಕಿಸ್ತಾನಕ್ಕೆ ಬಂದು ತನ್ನ ಪೂರ್ವಜರ ಮನೆಯನ್ನು ನೋಡಲು ವ್ಯವಸ್ಥೆ ಮಾಡಿ ಕೊಟ್ಟ ಇನ್ನೊಬ್ಬ ವ್ಯಕ್ತಿ ಚಂಡಿಗಢದಲ್ಲಿ ಹುಟ್ಟಿ ಬೆಳೆದ ೪೨ ವರ್ಷ ಪ್ರಾಯದ ಪರಾಗ್ ಸೆಹಗಾಲ್. ಲಾಹೋರಿನ ಮಾಡೆಲ್ ಟೌನ್ ಎಂಬಲ್ಲಿರುವ, ತನ್ನ ಅಜ್ಜ ಅಜ್ಜಿ ಯಾವತ್ತೂ ನೆನಪಿಸಿಕೊಳ್ಳುತ್ತಿದ್ದ ಅರಮನೆಯಂತಹ ಮನೆಯನ್ನು ಕಣ್ಣಾರೆ ಕಂಡು, ಕೈಯ್ಯಾರೆ ಮುಟ್ಟಿ ನೋಡಿದಾಗ ಸೆಹಗಾಲ್‌ರಿಗೆ ಬಾಯಿಂದ ಮಾತು ಹೊರಡದಾಯಿತು. ಅವರ ಅಜ್ಜ ಆಗ ಅಲ್ಲಿ ತಹಸಿಲ್ದಾರ್ ಆಗಿದ್ದರು. ‘ಸೆಹಗಾಲ್ ನಿವಾಸ್’ ಎಂಬ ಮನೆಯ ಫಲಕ ಇನ್ನೂ ನೇತಾಡುತ್ತಿದ್ದು, ಗೋಡೆಗಳು ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಆ ಭವ್ಯ ಮನೆಯಲ್ಲಿ ತನ್ನ ಅಜ್ಜ ಅಜ್ಜಿಯರನ್ನು ಕಲ್ಪಿಸಿಕೊಂಡು ಕಣ್ಣು ತುಂಬಿಸಿಕೊಂಡರು.

ಅಮೃತಸರದ ೮೯ ವರ್ಷ ಪ್ರಾಯದ ಜಿ. ಎಸ್. ಬಾತ್ರಾ ಹಲವು ವರ್ಷಗಳಿಂದ ತಮ್ಮಾನ್ ಎಂಬ ಹಳ್ಳಿಯಲ್ಲಿ ಬಿಟ್ಟು ಬಂದ ತಮ್ಮ ಮನೆಯ ಕನಸು ಕಾಣುತ್ತಿದ್ದರು. ನೊಶಾಬಾರ ಸಹಾಯದಿಂದ ಅವರು ಅಲ್ಲಿಗೆ ಹೋದರಾದರೂ, ಅಲ್ಲಿ ಅವರ ಮನೆಯ ಯಾವ ಕುರುಹೂ ಇರಲಿಲ್ಲ. ಅವರ ಮನೆಯಿದ್ದ ಜಾಗದಲ್ಲಿ ಹೊಸ ಕಟ್ಟಡಗಳು ತಲೆ ಎತ್ತಿದ್ದವು. ಆದರೂ ಬಾತ್ರಾರಿಗೆ ತನ್ನ ಮೂಲಸ್ಥಾನವನ್ನು ಒಮ್ಮೆ ನೋಡಬೇಕೆಂಬ ಬದುಕಿನ ಕೊನೇ ಆಸೆಯನ್ನು ನೆರವೇರಿಸಿಕೊಂಡ ಸಂತೋಷ. ಇದಕ್ಕೆ ಸಹಾಯ ಮಾಡಿದ ನೊಶಾಬಾರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ ಎನ್ನುತ್ತಾರೆ ಅವರು.

ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮೊದಲ ತಲೆಮಾರಿನವರಲ್ಲಿ ಈಗ ಹೆಚ್ಚಿನವರು ೮೦ ದಾಟಿದ ಹಿರಿಯರು. ಅವರೆಲ್ಲರಿಗೂ ತಮ್ಮ ಪೂರ್ವಜರ ಅಥವಾ ತಾವು ಹುಟ್ಟಿ ಆಡಿ ಬೆಳೆದ ಮನೆ, ಜಾಗವನ್ನು ಸಾಯುವ ಮೊದಲು ಒಮ್ಮೆಯಾದರೂ ನೋಡಬೇಕು ಎನ್ನುವ ತುಡಿತ ಇದ್ದೇ ಇದೆ. ಆದರೆ, ಪಾಕಿಸ್ತಾನಕ್ಕೆ ಹೋಗಲು ವೀಸಾ ಸಿಕ್ಕುವುದು ಅತ್ಯಂತ ಕಠಿಣವಾದುದರಿಂದ, ಎಷ್ಟು ಜನರಿಗೆ ತಮ್ಮ ಬದುಕಿನ ಆ ಕೊನೇ ಆಸೆಯನ್ನು ಪೂರೈಸಿಕೊಳ್ಳುವುದು ಸಾಧ್ಯವಾಗುವುದೋ ತಿಳಿಯದು. ನೊಶಾಬಾ ಶೆಹಝಾದ್ ಈವರೆಗೆ ಇಂತಹ ೨೦೦ಕ್ಕೂ ಹೆಚ್ಚು ಹಿರಿಯ ಜೀವಗಳಿಗೆ ತಮ್ಮ ಬದುಕಿನ ಕೊನೆ ಆಸೆಯನ್ನು ಪೂರೈಸಿಕೊಳ್ಳಲು ಸಹಾಯ ಮಾಡಿದ್ದಾರೆ.

Tags:
error: Content is protected !!