ನವದೆಹಲಿ: ಲೋಕಸಭೆಯ ಒಳಗೆ ನುಗ್ಗಿ ಗೊಂದಲ ಸೃಷ್ಠಿಸಿದ ಘಟನೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರೀ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ನಿನ್ನೆ ಭದ್ರತಾ ಲೋಪ ಸಂಭವಿಸಿದ ಹಿನ್ನೆಲೆಯಲ್ಲಿ ಇಂದು ಸಂಸತ್‌ಗೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಸಂಸತ್ ಮುಂಭಾಗದ ರಸ್ತೆಯಲ್ಲಿ ಹೆಜ್ಜೆ, ಹೆಜ್ಜೆಗೂ ಪೋಲಿಸ್ ಸರ್ಪಗಾವಲು ಹಾಕಲಾಗಿದೆ. ಭದ್ರತೆಯಲ್ಲಿ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದ್ದು, ಇಂದು ಸಾರ್ವಜನಿಕರಿಗೆ ಪ್ರವೇಶ ರದ್ದು ಮಾಡಲಾಗಿದೆ. ಸಂಸದರಾದರೂ ಪಾಸ್ ತೋರಿಸಿದ್ರೆ ಎಂಟ್ರಿ ನೀಡಲಾಗುತ್ತಿದೆ.
ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಎಂಬುವವರನ್ನು ಲೋಕಸಭಾ ಸೆಕ್ರೇಟರಿ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವರು ಹೇಳಿದ್ದೇನು?
ಭದ್ರತಾ ಲೋಪ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸಂಸದರು ಪಾಸ್ ವಿತರಣೆ ಮಾಡುವಾಗ ಜಾಗರುಕತೆ ವಹಿಸಬೇಕು. ಸ್ಪೀಕರ್ ಸಹ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆಯೂ ಸಂಸತ್‌ನಲ್ಲಿ ಭದ್ರತಾ ಲೋಪ ಆಗಿತ್ತು. ನಮ್ಮ ಸರ್ಕಾರ ಸಂಪೂರ್ಣ ತನಿಖೆ ನಡೆಸುತ್ತಿದೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.