ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್.ಎಸ್.ಎಸ್ ಅನ್ನು ದೇಶದಿಂದ ಓಡಿಸುವವರೆಗೂ ಬಿಡುವುದಿಲ್ಲ ಎಂದು ಶಪಥ ಮಾಡಿದೆ.
ಭಾನುವಾರ ದೆಹಲಿಯ ಐತಿಹಾಸಿಕ ರಾಮ್ ಲೀಲಾ ಮೈದಾನದಲ್ಲಿ ನಡೆದ ವೋಟ್ ಚೋರಿ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಕೇಂದ್ರ ಚುನಾವಣಾ ಆಯೋಗ ಮತ್ತು ಆರ್ ಎಸ್ ಎಸ್ ವಿರುದ್ಧ ಬೆಂಕಿಯುಗಿಳಿದರು.
ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು, ತಮ್ಮ ಭಾಷಣದಲ್ಲಿ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಮತಗಳ್ಳತನ ಪ್ರಕರಣವನ್ನು ಸಹ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಮತಗಳ್ಳತನದಿಂದಲೇ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾವು ಸತ್ಯದ ಬೆನ್ನಿಗೆ ನಿಂತು ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ (RSS) ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ, ಇದು ನನ್ನ ಗ್ಯಾರಂಟಿ ಅಬ್ಬರಿಸಿದರು. ಸತ್ಯ ಅತ್ಯಂತ ಅವಶ್ಯಕ ಎಂದು ಗಾಂಧಿ ಹೇಳುತ್ತಿದ್ದರು. ನಮ್ಮ ಧರ್ಮದಲ್ಲಿ ಸತ್ಯವನ್ನ ಅತ್ಯಂತ ಮುಖ್ಯ ಎಂದು ಭಾವಿಸಲಾಗಿದೆ. ಅದಕ್ಕಾಗಿ ಧರ್ಮದಲ್ಲಿ ʻಸತ್ಯಂ, ಶಿವಂ ಸುಂದರಂʼ ಎಂದು ಉಲ್ಲೇಖಿಸಿದೆ. ಆದರೆ ವಿಶ್ವ ಸತ್ಯ ಅಲ್ಲ ಶಕ್ತಿಯನ್ನು ನೋಡುತ್ತದೆ. ಯಾರ ಬಳಿಕ ಶಕ್ತಿ ಇದೆ ಅವರನ್ನು ಒಪ್ಪಿಕೊಳ್ಳುತ್ತೆ. ಈ ವಿಚಾರಧಾರೆ ಆರ್‌ಎಸ್‌ಎಸ್ ಸಿದ್ಧಾಂತ. ಅವರಿಗೆ ಸತ್ಯ ಅಲ್ಲ ಅಧಿಕಾರ ಮುಖ್ಯ. ಈಗ ಅಸತ್ಯ – ಸತ್ಯದ ನಡುವೆ ಹೋರಾಟ ನಡೆಯತ್ತಿದೆ. ನಾವು ಸತ್ಯದ ಹಿಂದೆ ನಿಂತು ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ. ಇದು ನನ್ನ ಗ್ಯಾರಂಟಿ ಎಂದು ಗುಡಿಗಿದರು.
ಚುನಾವಣಾ ಆಯುಕ್ತರಿಗೆ ವಾರ್ನಿಂಗ್
ಚುನಾವಣೆ ವೇಳೆ ಹತ್ತು ಸಾವಿರ ನೀಡುತ್ತಾರೆ. ಆದರೆ ಆಯೋಗ ಯಾವುದೇ ಆಕ್ಷೇಪಣೆ ಮಾಡುವುದಿಲ್ಲ. ಚುನಾವಣಾ ಆಯೋಗ ಬಿಜೆಪಿ ಸರ್ಕಾರದ ಜೊತೆಗೆ ನಿಂತು ಕೆಲಸ ಮಾಡುತ್ತಿದೆ. ಆಯೋಗಕ್ಕಾಗಿ ಈ ಸರ್ಕಾರ ಹೊಸ ಕಾನೂನು ಜಾರಿ ಮಾಡಿತು. ಹಾಗಾಗಿ ಆಯುಕ್ತರು ಏನೇ ಮಾಡಿದರು ಅವರ ವಿರುದ್ಧ ಕ್ರಮ ಇಲ್ಲ. ಆಯೋಗದ ಆಯುಕ್ತರಿಗೆ ಹೇಳುತ್ತೇನೆ ಮೋದಿ ಚುನಾವಣಾ ಆಯುಕ್ತರಲ್ಲ, ಮುಂದೆ ಅಸತ್ಯದ ಜೊತೆಗೆ ನಿಂತಿರುವ ಅಧಿಕಾರಿಗಳನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬ್ರೆಜಿಲ್ ಮಹಿಳೆ 22 ಬಾರಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ತಾತಾರೆ. ಎರಡೆರಡು ಕಡೆ ಮತದ ಹಕ್ಕು ಹೊಂದಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಆಯೋಗ ಈವರೆಗೂ ಉತ್ತರ ಕೊಟ್ಟಿಲ್ಲ. ನನ್ನ ಆರೋಪಗಳ ಮೇಲೆ ಸಂಸತ್‌ನಲ್ಲಿ ಚರ್ಚೆ ಮಾಡಲು ಬಿಜೆಪಿ ತಯಾರಿಲ್ಲ. ಇಂದು ಅವರ ಬಳಿಕ ಅಧಿಕಾರ ಇರಬಹುದು. ಇವರ ಕೈಯಿಂದ ಅಧಿಕಾರ ಹೊಗ್ತಿದ್ದಂತೆ ಅವರ ಧೈರ್ಯ ಏನಾಗುತ್ತೆ ನೋಡಿ ಎಂದು ಹೇಳಿದರು.
ಮೋದಿ ಸರ್ಕಾರ ಇಬ್ಬರು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ. ಭಾರತದಲ್ಲಿ ಸತ್ಯದ ಗೆಲುವುವಾಗಲಿದೆ. ಮೋದಿ, ಅಮಿತ್ ಶಾ ಏನ್ ಭಾಷಣ ಮಾಡಬೇಕು ಮಾಡಲಿ. ಆದ್ರೆ ನಾವು ದ್ವೇಷ, ಹಿಂಸೆಯಿಂದಲ್ಲ, ಸತ್ಯ ಮತ್ತು ಅಹಿಂಸೆಯಿಂದ ಅವರನ್ನ ಸೋಲಿಸುತ್ತೇವೆ. ಮೋದಿ ಅವರ ಮುಖ ನೋಡಿ ಜವರ ವಿಶ್ವಾಸ ಕುಗ್ಗಿ ಹೋಗಿದೆ ಎಂದು ಕುಟುಕಿದರು.
ಕರ್ನಾಟಕದಲ್ಲಿ ಮತಗಳ್ಳತನ ಆಗಿದ್ದು ಸಾಬೀತಾಗಿದೆ.
ನರೇಂದ್ರ ಮೋದಿ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿಯ ಜೊತೆ ಕೇಂದ್ರ ಚುನಾವಣಾ ಆಯೋಗ ಶಾಮೀಲಾಗಿದ್ದು, ಚುನಾವಣಾ ಆಯೋಗಕ್ಕಾಗಿ ಕಾನೂನನ್ನೇ ಬದಲಾವಣೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಹರಿಯಾಣದಲ್ಲಿ ಮತಗಳ್ಳತನ ಹೇಗೆ ಆಗಿದೆ ಅಂತಾ ತಿಳಿಯಬೇಕಿದೆ. ಒಂದೇ ಬೂತ್ನಲ್ಲಿ 200 ಸಲ ಹೇಗೆ ಮತ ಹಾಕಲು ಸಾಧ್ಯ? ಸಂಸತ್‌ನಲ್ಲಿ ಪ್ರಸ್ತಾಪ ಮಾಡಲು ಮುಂದಾದರೆ ಅವಕಾಶ ಕೊಡಲಿಲ್ಲ. ಹಿಂಸೆಯಿಲ್ಲದೆ ನಾವು ಈ ಯುದ್ಧ ಗೆಲ್ಲುತ್ತೇವೆ ಎಂದಿದ್ದಾರೆ.
ಸತ್ಯವು ಅತ್ಯಂತ ಮುಖ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ ಸತ್ಯವಲ್ಲ, ಶಕ್ತಿಯೇ ಮುಖ್ಯ ಎಂದು ಭಾಗವತ್ ಹೇಳಿದರು. ಸತ್ಯ ಎತ್ತಿಹಿಡಿಯುವ ಮೂಲಕ ಮೋದಿ ಮತ್ತು ಆರ್‌ಎಸ್‌ಎಸ್ ಸರ್ಕಾರವನ್ನು ನಾವು ತೆಗೆದುಹಾಕುತ್ತೇವೆ. ಮೋಹನ್ ಭಾಗವತ್ ಸತ್ಯಕ್ಕೆ ಯಾವುದೇ ಬೆಲೆಯಿಲ್ಲ ಎನ್ನುತ್ತಾರೆ., ನಾವು ಸತ್ಯದ ಹಿಂದೆ ಇರುವವರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ರ್ಯಾಲಿ ನಡೆಸಿತು. ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಲೋಕಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಬಿಸಿ ಚರ್ಚೆ ನಡೆದ ಕೆಲವು ದಿನಗಳ ನಂತರ ಈ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ರ್ಯಾಲಿ ನಡೆಸಿದೆ. ಈ ವೇಳೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ .ಡಿ.ಕೆ ಶಿವಕುಮಾರ್ ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ಸಚಿನ್ ಪೈಲಟ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.





