ಚೆನ್ನೈ : ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಿದ್ಧತೆ ಭರದಿಂದ ಸಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ತಮಿಳುನಾಡು ಗವರ್ನರ್ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿದ್ದಾರೆ. ಚೆನ್ನೈನ ಲೋಕಭವನದಲ್ಲಿ ವಿಜಯ್ ಗವರ್ನರ್ ಅವರನ್ನು ಭೇಟಿಯಾಗಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ನಾಳೆ ನಟ ದಳಪತಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡೋದು ಬಹುತೇಕ ಫಿಕ್ಸ್ ಆಗಿದೆ.
ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿರುವ ಟಿವಿಕೆ ಪಕ್ಷದ ನಾಯಕ ವಿಜಯ್ ನಾಳೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ವಿಜಯ್ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ನಾಳೆ ನಡೆಯಲಿರುವ ಅಧಿಕಾರ ಸ್ವೀಕಾರ ಸಮಾರಂಭದ ಹಿನ್ನೆಲೆ ನೆಹರು ಕ್ರೀಡಾಂಗಣದಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಸರ್ಕಾರ ರಚನೆಗೆ ಟಿವಿಕೆಗೆ ಹಸ್ತಪಡೆ ಬೆಂಬಲ ಸೂಚಿಸಿದ್ದು, ವಿಜಯ್ ಪದಗ್ರಹಣ ಕಾರ್ಯಕ್ರಮಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗಿಯಾಗುವ ಸಾಧ್ಯತೆ ಇದೆ. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಟಿವಿಕೆ ಜೊತೆ ‘ಕೈ’ ಜೋಡಿಸಿದ ಕಾಂಗ್ರೆಸ್
ಇನ್ನು, ನೂತನ ಸರ್ಕಾರ ರಚನೆಗೆ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಇಷ್ಟು ವರ್ಷಗಳ ಕಾಲ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಇದೀಗ ಟಿವಿಕೆಗೆ ಬೆಂಬಲ ನೀಡಿದೆ. ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ಶಾಸಕ ವಿಶ್ವನಾಥ್ ಮಾತನಾಡಿ ಮಾಹಿತಿ ನೀಡಿದ್ದಾರೆ. ನಾವು ಟಿವಿಕೆ ಪಕ್ಷಕ್ಕೆ ಸಂಪೂರ್ಣವಾಗಿ ಸಪೋರ್ಟ್ ಮಾಡುತ್ತೇವೆ. ತಮಿಳುನಾಡಿನ ಜನತೆ ತೀರ್ಮಾನವನ್ನು ಗೌರವಿಸಬೇಕು, ಇದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಎಂದು ಹೇಳಿದರು.




