ಮುಂಬೈ : ಜಾನೆ ಭಿ ದೋ ಯಾರೋ, ಮೈ ಹೂ ನಾ ಮತ್ತು ಹಿಟ್ ಟಿವಿ ಶೋ ಸಾರಾಭಾಯಿ ವರ್ಸಸ್ ಸಾರಾಭಾಯಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಬಾಲಿವುಡ್ ಹಿರಿಯ ನಟ ಸತೀಶ್ ಶಾ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹಿರಿಯ ನಟ ಸತೀಶ್ ಶಾ ಅವರು ಇಂದು ಮಧ್ಯಾಹ್ನ ಬಾಂದ್ರಾ ಪೂರ್ವದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು 30 ವರ್ಷಗಳಿಗೂ ಹೆಚ್ಚು ಕಾಲ ಅವರ ಆಪ್ತ ಸಹಾಯಕರಾಗಿರುವ ರಮೇಶ್ ಕಡತಲ ಅವರು ತಿಳಿಸಿದ್ದಾರೆ.
“ಸತೀಶ್ ಶಾ ಅವರು ಹೃದಯಾಘಾತದಿಂದ ನಿಧನರಾದಂತೆ ತೋರುತ್ತಿದೆ. ಆದರೆ ಅವರ ಸಾವಿನ ಹಿಂದಿನ ಕಾರಣ ತಿಳಿಯಲು ವೈದ್ಯರಿಂದ ಅಂತಿಮ ವರದಿಗಳಿಗಾಗಿ ನಾವು ಕಾಯುತ್ತಿದ್ದೇವೆ” ಎಂದು ಕಡತಲ ಪಿಟಿಐಗೆ ತಿಳಿಸಿದ್ದಾರೆ.
ಸತೀಶ್ ಶಾ ಅವರ ನಿಧನಕ್ಕೆ ಹಿಂದಿ ಕಿರುತೆರೆ ವಲಯ ಮತ್ತು ಬಾಲಿವುಡ್ ಕಂಬನಿ ಮಿಡಿದಿದ್ದು ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.





