Mysore
25
broken clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಸ್ವಾಮಿ ವಿವೇಕಾನಂದ ಜಯಂತಿ: ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ಬೆಂಗಳೂರು: ಇಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ತಿಳಿಸಿ, ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ದ್ರೌಪದಿ ಮುರ್ಮು ಅವರು, ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕತೆಯ ಸಂದೇಶವನ್ನು ಪಾಶ್ಚಿಮಾತ್ಯ ದೇಶಗಳಲ್ಲಿಯೂ ಪಸರಿಸಿದರು. ಅವರು ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಲು ಕರೆ ನೀಡಿ, ಯುವಕರನ್ನು ಪ್ರೇರೆಪಿಸಿದರು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು. ಯುವ ಮನಸ್ಸುಗಳಲ್ಲಿ ಉತ್ಸಾಹ ಹಾಗೂ ಗುರಿ ಸಾಧನೆಗೆ ಸದಾ ಸ್ಫೂರ್ತಿದಾಯಕರಾದವರು. ಅವರ ಆಶಯದಂತೆ ಬಲಿಷ್ಠ ಮತ್ತು ಅಭಿವದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ನಾವು ಶ್ರಮಿಸಬೇಕಿದೆ. ಅವರ ತತ್ವಾದರ್ಶಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಭಾರತೀಯ ನಾಗರೀಕತೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿದ ಮಹಾನ್‌ ಚಿಂತಕ, ಲಕ್ಷಾಂತರ ಯುವಕಇಗೆ ಸ್ಫೂರ್ತಿಯ ಚಿಲುಮೆ. ಅವರು 18೯೩ರಲ್ಲಿ ಅಮೆರಿಕಾದ ಷಿಕಾಗೋನಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದತಂಹ ಉಪನ್ಯಾಸ ಐತಿಹಾಸಿಕವಾದದ್ದು ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು, ಶತಮಾನಗಳಿಂದ ಆಚರಣೆಯಲ್ಲಿದ್ದ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ತೊಡೆದು ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರನ್ನು ಅವರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯೋಣ ಎಂದಿದ್ದಾರೆ.

ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ಕಿರಿ ವಯಸ್ಸಿನಲ್ಲಿಯೇ ವಿಶ್ವ ತಲೆಬಾಗುವಂತಹ ಆಧ್ಯಾತ್ಮಿಕ ಗುರುವಾಗಿ ಬೆಳೆದ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಫೂರ್ತಿ ಎಂದು ಹೇಳಿದ್ದಾರೆ.

ನಾಡಿನ ಸಮಸ್ತ ಯುವ ಸಮುದಾಯಕ್ಕೆ ರಾಷ್ಟ್ರೀಯ ಯುವದಿನದ ಶುಭಾಶಯಗಳು. ವಿವೇಕಾನಂದರನ್ನು ಆರಾಧನೆಗಷ್ಟೇ ಸೀಮಿತವಾಗಿಸದೆ ಅವರ ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ, ಆ ಮೂಲಕ ದಿವ್ಯ ಚೇತನವನ್ನು ಗೌರವಿಸೋಣ ಎಂದು ಶುಭಾಶಯ ತಿಳಿಸಿದ್ದಾರೆ.

ಆರ್. ಅಶೋಕ್‌

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು, ಪ್ರಖರ ಚಿಂತನೆ, ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಂತ ಆಧ್ಯಾತ್ಮಿಕ ಶಕ್ತಿಯ ಮಹತ್ವವನ್ನು ಜಗತ್ತಿಗೆ ಪಸರಿಸಿದ ಮಹಾತ್ಮ ಸ್ವಾಮಿ ವಿವೇಕಾನಂದರು. ಇವರ ಜನ್ಮದಿನವನ್ನು ರಾಷ್ಟ್ರೀಯ ‘ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶತ ಶತ ನಮನಗಳು ಎಂದು ಶುಭಾ ಹಾರೈಸಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾಸ್ವಾಮಿ

ಕೇಂದ್ರ ಸಚಿವ ಎಚ್‌.ಡಿ.ಕುಮಾಸ್ವಾಮಿ ಅವರು, ನಿಮ್ಮನ್ನು ನೀವು ಜಯಿಸಿ,
ಇಡೀ ಜಗತ್ತೇ ನಿಮ್ಮದಾಗುತ್ತದೆ. ಏಳಿ.. ಎದ್ದೇಳಿ.. ಗುರಿ ಮುಟ್ಟುವ ತನಕ ನಿಲ್ಲದಿರಿ. ಇಂತಹ ಮುಖ್ಯ ಸಂದೇಶಗಳನ್ನು ನೀಡಿ, ಮನುಕುಲವನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಮುನ್ನಡೆಸಿದ ಮಹಾನ್ ಚೇತನ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ನನ್ನ ಶ್ರದ್ಧಾಪೂರ್ವಕ ಪ್ರಣಾಮಗಳು ಎಂದಿದ್ದಾರೆ.

ವಿವೇಕಾನಂದರ ಜನ್ಮದಿನವನ್ನು ಭಾರತವು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸುತ್ತಿದೆ. ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರ ಪಾತ್ರ ನಿರ್ಣಾಯಕ ಎಂಬುದು ನನ್ನ ಅಭಿಪ್ರಾಯ. ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕ ಹಾಗೂ ಶ್ರೀ ತಿರುವಳ್ಳುವರ್ ಪ್ರತಿಮಾಸ್ಥಳದ ನಡುವೆ 77ಮೀಟರ್ ಉದ್ದದ ಗಾಜಿನ ಸೇತುವೆ ನಿರ್ಮಾಣವಾಗುತ್ತಿದ್ದು, ಆ ಸೇತುವೆಗೆ ಅಗತ್ಯವಾದ 216 ಟನ್ IRS ದರ್ಜೆಯ ಉಕ್ಕನ್ನು ಭಾರತೀಯ ಉಕ್ಕು ಪ್ರಾಧಿಕಾರ SAILsteel ಅಧೀನದ ಸೇಲಂ ಉಕ್ಕು ಸ್ಥಾವರದಿಂದ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

Tags: