Mysore
30
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಟ್ರಂಪ್‌ ಭಾಗವಹಿಸಿದ್ದ ಡಿನ್ನರ್‌ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ : ಆಗಿದ್ದೇನು?

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗವಹಿಸಿದ್ದ ಔತಣಕೂಟ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಷಿಂಗ್ಟನ್ ಡಿ.ಸಿಯ ಪ್ರತಿಷ್ಠಿತ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಟ್ರಂಪ್ ಅವರು ಭಾಷಣ ಮಾಡಲು ವೇದಿಕೆಗೆ ಸಿದ್ಧರಾಗುತ್ತಿದ್ದಂತೆಯೇ, ಹೋಟೆಲ್‌ನ ಹೊರಗೆ ಸತತವಾಗಿ 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಕ್ಷಣಾರ್ಧದಲ್ಲಿ ಅಧ್ಯಕ್ಷರು ಮತ್ತು ಗಣ್ಯರನ್ನು ಸುತ್ತುವರಿದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಶಂಕಿತನ ಬಂಧನ
ಗುಂಡಿನ ದಾಳಿ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಒಬ್ಬ ಶಂಕಿತ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶ್ವೇತಭವನದ ಸುತ್ತಮುತ್ತಲಿನ ಭದ್ರತೆಯನ್ನು ಹಿಂದೆಂದಿಗಿಂತಲೂ ಹೆಚ್ಚಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ದಾಳಿಕೋರನು ಕಾರ್ಯಕ್ರಮದ ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡು ಹಾರಿಸಿದ್ದರಿಂದ ಹಾಲ್‌ನಲ್ಲಿದ್ದ ಅತಿಥಿಗಳು ಟೇಬಲ್‌ಗಳ ಕೆಳಗೆ ಅವಿತುಕೊಂಡಿದ್ದರು. ಈ ದಾಳಿಯಲ್ಲಿ ಒಬ್ಬ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗೆ ಬುಲೆಟ್ ತಗುಲಿದ್ದು, ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ನಂತರ ಶ್ವೇತಭವನ, ಕ್ಯಾಪಿಟಲ್ ಹಿಲ್ ಮತ್ತು ವಾಷಿಂಗ್ಟನ್‌ನ ಪ್ರಮುಖ ಸರ್ಕಾರಿ ಕಟ್ಟಡಗಳ ಸುತ್ತಲೂ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರ ಭದ್ರತಾ ಪ್ರೋಟೋಕಾಲ್‌ಗಳನ್ನು ಮರುಪರಿಶೀಲಿಸಲಾಗುತ್ತಿದೆ.

ಟ್ರಂಪ್ ಪ್ರತಿಕ್ರಿಯೆ
ಘಟನೆಯ ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಭದ್ರತಾ ಪಡೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡಿವೆ. ಅವರು ಅತ್ಯಂತ ವೇಗವಾಗಿ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಿದ್ದಾರೆ. ಶೂಟರ್‌ನನ್ನು ಈಗಾಗಲೇ ಬಂಧಿಸಲಾಗಿದೆ. ನಾನು ಕಾರ್ಯಕ್ರಮವನ್ನು ಮುಂದುವರಿಸಲು ಸೂಚಿಸಿದ್ದೇನೆ. ಆದರೆ ಭದ್ರತೆಯ ದೃಷ್ಟಿಯಿಂದ ಅಂತಿಮ ನಿರ್ಧಾರವನ್ನು ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇನೆ” ಎಂದು ಟ್ರಂಪ್ ತಿಳಿಸಿದ್ದಾರೆ.

 

Tags:
error: Content is protected !!