ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ.
ಕೋಶಿ ನದಿಯ ಪ್ರಮುಖ ಉಪನದಿಯಾದ ಲ್ಹೆಂಡೆ ಖೋಲಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಅಣೆಕಟ್ಟು ನೀರಿನ ಒತ್ತಡಕ್ಕೆ ತಡೆಯಲಾರದೆ ಒಮ್ಮೆಲೇ ಒಡೆದಿದೆ. ಇದರಿಂದಾಗಿ ಸಂಗ್ರಹವಾಗಿದ್ದ ಲಕ್ಷಾಂತರ ಲೀಟರ್ ನೀರು ಮತ್ತು ಕೆಸರು ಒಟ್ಟಿಗೆ ಅತ್ಯಂತ ವೇಗವಾಗಿ ಕೆಳಭಾಗಕ್ಕೆ ನುಗ್ಗಿ ಜಲಪ್ರಳಯವನ್ನು ಸೃಷ್ಟಿಸಿದೆ. ಪ್ರವಾಹ ಪೀಡಿತ ದುರಂತ ವಲಯಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನೇಪಾಳ ಸೇನೆಯು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಸದ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯು ಬರೋಬ್ಬರಿ 15 ಹೆಲಿಕಾಪ್ಟರ್‌ಗಳನ್ನು ಕಣಕ್ಕಿಳಿಸಿದೆ ಎಂದು ನೇಪಾಳ ಸೇನೆಯ ಬ್ರಿಗೇಡಿಯರ್ ಜನರಲ್ ರಾಜಾ ರಾಮ್ ಬಸ್ನೆಟ್ ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಹಿಮಕುಸಿತವೇ ಈ ಇಡೀ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪರ್ವತ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಹಿಮ ಮತ್ತು ಬಂಡೆಗಳು ಒಟ್ಟಿಗೆ ಕುಸಿದು ಬಿದ್ದ ಪರಿಣಾಮ, ನದಿಗಳಲ್ಲಿ ದಿಢೀರನೆ ನೀರಿನ ಮಟ್ಟ ಏರಿಕೆಯಾಗಿ ಮಹಾಪ್ರವಾಹ ಸೃಷ್ಟಿಯಾಗಿದೆ. ಈ ಆಕಸ್ಮಿಕ ಜಲಸ್ಫೋಟವು ನೇಪಾಳದ ಹಲವು ಭಾಗಗಳನ್ನು ಸಂಪೂರ್ಣವಾಗಿ ಆಪೋಶನ ತೆಗೆದುಕೊಂಡಿದ್ದು, ಭೀಕರ ಪ್ರವಾಹದ ಅಲೆಗಳಿಗೆ ಸಿಲುಕಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹತ್ತಾರು ಹಳ್ಳಿಗಳು ಜಲಾವೃತ
ಪ್ರವಾಹದ ತೀವ್ರತೆ ಎಷ್ಟಿತ್ತೆಂದರೆ, ನದಿ ಪಾತ್ರದ ಸುತ್ತಮುತ್ತಲಲ್ಲಿದ್ದ ಹತ್ತಾರು ಹಳ್ಳಿಗಳು ಜಲಾವೃತಗೊಂಡಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಪ್ರಮುಖ ಸಂಪರ್ಕ ರಸ್ತೆಗಳು ಕಡಿದುಹೋಗಿದ್ದು, ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ದುರಂತ ಸಂಭವಿಸಿದಾಗಿನಿಂದ ನೂರಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, ಕಣ್ಮರೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ನದಿಗಳ ಆರ್ಭಟಕ್ಕೆ ಸಿಲುಕಿದ ಹಳ್ಳಿಗಳ ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.
ನಾಪತ್ತೆಯಾದ ಪ್ರವಾಸಿಗರು
ಕೈಲಾಶ ಮಾನಸರೋವರ ಯಾತ್ರೆಗಾಗಿ ಟಿಬೆಟ್‌ಗೆ ಹೊರಟಿದ್ದ ಸುಮಾರು 400 ಯಾತ್ರಾರ್ಥಿಗಳು ನೇಪಾಳದಲ್ಲಿ ಸಂಭವಿಸಿದ ಭೀಕರ ಆಕಸ್ಮಿಕ ಪ್ರವಾಹದ ಕಾರಣದಿಂದಾಗಿ ಸಂಪರ್ಕ ಕಳೆದುಕೊಂಡಿದ್ದಾರೆ. ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದಾರೆ ಎಂದು ವರದಿಯಾಗಿದೆ. ನೇಪಾಳದ ರಸುವಾ ಜಿಲ್ಲೆಯ ರಸುವಾಗಢಿ ಪ್ರದೇಶದ ಸಮೀಪ ನುಗ್ಗಿದ ಮಹಾಪ್ರವಾಹವು ಅಲ್ಲಿನ ಪ್ರಮುಖ ರಸ್ತೆಗಳು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ರಸ್ತೆಗಳು ಕೊಚ್ಚಿಹೋಗಿರುವುದರಿಂದ ಇಡೀ ಪ್ರದೇಶವು ಹೊರಜಗತ್ತಿನಿಂದ ಕಡಿತಗೊಂಡಿದ್ದು, ಯಾತ್ರಾರ್ಥಿಗಳನ್ನು ಪತ್ತೆಹಚ್ಚಲು ಮತ್ತು ಅವರ ಪ್ರಸ್ತುತ ಪರಿಸ್ಥಿತಿಯನ್ನು ತಿಳಿಯಲು ರಕ್ಷಣಾ ಪಡೆಗಳು ತೀವ್ರ ಪ್ರಯತ್ನ ನಡೆಸುತ್ತಿವೆ.




