ನವದೆಹಲಿ: ಅಗತ್ಯ ದಾಖಲೆಗಳು ಇಲ್ಲದೆ ರೈತರಿಗೆ ನೀಡುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ 2 ಲಕ್ಷಕ್ಕೆ ಹೆಚ್ಚಿಸಿದ್ದು, ಇದು ಜನವರಿ.1ರಿಂದಲೇ ಜಾರಿಗೆ ಬರಲಿದೆ.
ಇದಕ್ಕೂ ಮೊದಲು ಅಡಮಾನವಿಲ್ಲದೇ 1.6 ರೂ. ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ಆರ್‌ಬಿಐನ ಈ ಹೊಸ ನಿರ್ದೇಶನವನ್ನು ಬ್ಯಾಂಕ್‌ಗಳಿಗೆ ಈಗಾಗಲೇ ತಿಳಿಸಿದ್ದು, ಜನವರಿಯಿಂದ ಜಾರಿಗ ತರಲು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡಿದೆ. ಜೊತೆಗೆ ದೇಶದಾದ್ಯಂತ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ 2 ಲಕ್ಷದವರೆಗಿನ ಸಾಲಕ್ಕೆ ಅಡಮಾನ ಅಥವಾ ಅಗತ್ಯ ದಾಖಲೆಗಳನ್ನು ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.
ಕೃಷಿಯಲ್ಲಿ ಹೆಚ್ಚುತ್ತಿರುವ ಮೂಲ ಬಂಡವಾಳ, ಬೀಜ ಹಾಗೂ ಗೊಬ್ಬರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ. ಇದರಿಂದಾಗಿ ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಒಳಗೊಂಡಂತೆ ಶೇಕಡಾ.86ರಷ್ಟು ರೈತರಿಗೆ ನೆರವಾಗಲಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.
ಈ ಹೊಸ ಮಾರ್ಗಸೂಚಿ ರೈತರಿಗೆ ಬೇಗ ತಲುಪಿಸುವ ಉದ್ದೇಶದಿಂದ ಪ್ರಚಾರ ಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಇದರ ಜೊತೆಯಲ್ಲಿ ರೈತರು ಕಿಸಾನ್ ಕಾರ್ಡ್ ಬಳಸಿದರೆ ಶೇಕಡಾ.4ರ ಬಡ್ಡಿ ದರದಲ್ಲಿ 3 ಲಕ್ಷದವರೆಗೂ ಸಾಲ ಪಡೆಯಬಹುದು ಎಂದು ತಿಳಿಸಲಾಗಿದೆ.
ಹಣಕಾಸು ವಲಯದ ವ್ಯಾಪ್ತಿಗೆ ಕೃಷಿ ಕ್ಷೇತ್ರದ ಪಾಲನ್ನು ಹೆಚ್ಚಿಸುವುದು. ರೈತರು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಜೀವನ ಕ್ರಮ ಸುಧಾರಿಸುವುದು ಹಾಗೂ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶ ಎಂದು ಹೇಳಿದೆ.
ಈ ಮೂಲಕ ಅನ್ನದಾತರಿಗೆ ಆರ್‌ಬಿಐ ಗುಡ್‌ನ್ಯೂಸ್ ನೀಡಿದ್ದು, ಇದು ಮುಂದಿನ ದಿನಗಳಲ್ಲಿ ರೈತರಿಗೆ ವರದಾನವಾಗಲಿದೆ. ಹೀಗಾಗಿ ಮತ್ತಷ್ಟು ಯುವಕರು ಕೃಷಿಯತ್ತ ಮುಖಮಾಡಲು ಇದು ಸಂಪೂರ್ಣ ಸಹಕಾರಿಯಾಗಲಿದೆ.