ನವದೆಹಲಿ: ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ನ್ಯಾಯ ಒದಗಿಸುವುದಕ್ಕಿಂತ ಅಪರಾಧ ಮರೆಮಾಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಶಿಶುವಿಹಾರದಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು, ಸಂತ್ರಸ್ತ ಮಕ್ಕಳ ಪೋಷಕರು ದೂರು ನೀಡಿದ 12 ಗಂಟೆಗಳ ಬಳಿಕ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ದಾಖಲಿಸಿಕೊಳ್ಳಲು ಜನರು ಪ್ರತಿಭಟನೆ ಮಾಡಬೇಕೇ, ಸಾರ್ವಜನಿಕರು ನ್ಯಾಯಕ್ಕಾಗಿ ಬೀದಿಗಿಳಿಯುವವರೆಗೂ ಅವರಿಗೆ ನ್ಯಾಯ ನೀಡುವ ಮೊದಲ ಹೆಜ್ಜೆ ಇಡಲಿಲ್ಲ. ನಾವು ಈಗ ಎಫ್‌ಐಆರ್ ದಾಖಲಿಸಲು ಪ್ರತಿಭಟನೆ ಮಾಡಬೇಕೇ ಎಂದು ಪ್ರಶ್ನಿಸಿದರು.
ನ್ಯಾಯವನ್ನು ಒದಗಿಸುವುದಕ್ಕಿಂತ ಅಪರಾಧವನ್ನು ಮರೆಮಾಚಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅದರಲ್ಲಿ ಮಹಿಳೆಯರು ಹಾಗೂ ದುರ್ಬಲ ವರ್ಗದ ಜನರು ಹೆಚ್ಚಿನ ಬಲಿಪಶುಗಳಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.