Mysore
22
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ 

ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ ನೀಡುವುದು ಕಷ್ಟವಾದರೂ,ಇಂತಹ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತಲು ಪೂರಕ ವಾತಾವರಣ ಇರುವುದು ಮಾತ್ರ ನಿಜ. ಕಾರಣ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ಎರಡನೇ ಬಾರಿ ವಿಸ್ತರಣೆಯಾದ ನಂತರ ಎದ್ದಿರುವ ಅಸಮಾಧಾನದ ಬೇಗೆ. ಹಾಗೆ ನೋಡಿದರೆ ಈ ಬಾರಿ ಅಸಮಾಧಾನಿತರ ಸಂಖ್ಯೆ ದೊಡ್ಡದು. ಏಕೆಂದರೆ ಈ ಸಲ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲು ಐವತ್ತಕ್ಕೂ ಹೆಚ್ಚು ಮಂದಿ ಪ್ರಯತ್ನಿಸಿದ್ದರು.

ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆಯ ಕಸರತ್ತು ದಿಲ್ಲಿಯಲ್ಲಿ ನಡೆಯುತ್ತಿದ್ದಾಗ ಅಲ್ಲಿ ಬೀಡು ಬಿಟ್ಟ ಮಾಜಿ ಸಚಿವರು, ಶಾಸಕರ ದಂಡನ್ನು ನೋಡಿ ಹೈಕಮಾಂಡ್ ವರಿಷ್ಟರೇ ದಿಘ್ಮೂಢರಾಗಿದ್ದರು. ಅಂದ ಹಾಗೆ ಇದರಲ್ಲಿ ಈ ಹಿಂದೆ ಸಚಿವರಾಗಿದ್ದವರ ಒಂದು ದಂಡಿದ್ದರೆ,ಹಲವು ಬಾರಿ ಶಾಸಕರಾದವರು,ಮೊದಲನೇ ಬಾರಿ ಗೆದ್ದವರು ಸೇರಿದಂತೆ ಮತ್ತೊಂದು ದೊಡ್ಡ ದಂಡು ಇತ್ತು. ಆದರೆ ಎರಡನೇ ಕಂತಿನ ವಿಸ್ತರಣೆಯಲ್ಲಿ ಹತ್ತೊಂಬತ್ತು ಮಂದಿ ಮಾತ್ರ ಸಂಪುಟ ಸೇರಲು ಅವಕಾಶವಿತ್ತಲ್ಲ, ಹೀಗಾಗಿ ಸಂಪುಟ ವಿಸ್ತರಣೆಯ ನಂತರ ಬಹುತೇಕ ಆಕಾಂಕ್ಷಿಗಳು ನಿರಾಸೆಗೊಳ್ಳುವುದು ಸಹಜವೇ ಆಗಿತ್ತು.

ಪರಿಣಾಮ, ಈ ಹಿಂದೆ ಸಚಿವರಾಗಿದ್ದು ಅವಕಾಶ ವಂಚಿತರಾಗಿರುವವರು ಸೇರಿದಂತೆ ಬಹುದೊಡ್ಡ ಅಸಮಾಧಾನಿತರ ಗುಂಪು ಕಾಂಗ್ರೆಸ್ ಪಕ್ಷದಲ್ಲಿ ತಲೆ ಎತ್ತಿದೆ. ವಸ್ತುಸ್ಥಿತಿ ಎಂದರೆ ಈ ಸಂದರ್ಭ ಎಷ್ಟು ಸೂಕ್ಷ್ಮವಾಗಿದೆ ಎಂದರೆ ತಮ್ಮ ಅಸಮಾಧಾನವನ್ನು ಹೊರಹಾಕಲು ಪೂರಕವಾದ ಪರ್ಯಾಯ ಶಕ್ತಿ ಕೇಂದ್ರವೊಂದು ತಲೆ ಎತ್ತಿದರೆ ಇಂತಹ ಬಹುತೇಕ ಅಸಮಾಧಾನಿತರು ಅತ್ತ ಕಡೆ ವಾಲಿಕೊಳ್ಳುತ್ತಾರೆ. ಆದರೆ ಇಂತಹ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತಲು ಪೂರಕ ವಾತಾವರಣ ಇದೆಯೇ?ಎಂಬುದು ಸದ್ಯದ ಪ್ರಶ್ನೆ. ನೇರವಾಗಿ ಹೇಳಬೇಕೆಂದರೆ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತಲು ಹೈಕಮಾಂಡ್ ಮಟ್ಟದ ನಾಯಕರ ಬೆಂಬಲ ಇರಬೇಕು. ಕಾರಣ ಬಂಡಾಯದಂತಹ ಸನ್ನಿವೇಶಗಳು ಉದ್ಭವವಾದಾಗ ಅಸಮಾಧಾನಿತರ ಹೋರಾಟಕ್ಕೆ ದಿಲ್ಲಿ ಮಟ್ಟದಲ್ಲಿ ಸಮರ್ಥಿಸುವವರು ಬೇಕಲ್ಲ? ಇಂತಹ ಸಮರ್ಥಕರು ಹೈಕಮಾಂಡ್ ಮಟ್ಟದಲ್ಲಿದ್ದರೆ ಪರ್ಯಾಯ ಶಕ್ತಿ ಕೇಂದ್ರಕ್ಕೆ ಸಾವಿರ ಆನೆಗಳ ಬಲ ದಕ್ಕಿದ್ದಂತೆ.

೧೯೫೬ ರಲ್ಲಿ ಮುಖ್ಯಮಂತ್ರಿಯಾದ ನಿಜಲಿಂಗಪ್ಪ ೧೯೫೭ ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾದರಲ್ಲ, ಹೀಗವರು ಮುಖ್ಯಮಂತ್ರಿಯಾದ ಒಂದೇ ವರ್ಷದಲ್ಲಿ ಅವರ ವಿರುದ್ಧ ಬಿ.ಡಿ.ಜತ್ತಿ ಮತ್ತಿತರರು ಬಂಡಾಯವೆದ್ದರು. ಈ ಸಂದರ್ಭದಲ್ಲಿ ನಿಜಲಿಂಗಪ್ಪ ಅವರಿಗೆ ಸ್ವತಃ ಪ್ರಧಾನಿ ನೆಹರೂ ಅವರ ಬೆಂಬಲವಿತ್ತಾದರೂ ಬಿ.ಡಿ.ಜತ್ತಿ ಮತ್ತಿತರರಿದ್ದ ಗುಂಪು ದೊಡ್ಡ ಮಟ್ಟದಲ್ಲಿ ದಂಗೆ ಎಬ್ಬಿಸಿತು. ಹೀಗೆ ಆ ಬಣ ದಂಗೆ ಎಬ್ಬಿಸಲು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಅದಕ್ಕಿದ್ದ ಬೆಂಬಲವೇ ಕಾರಣ! ಅರ್ಥಾತ್, ನಿಜಲಿಂಗಪ್ಪ ಅವರ ವಿರುದ್ಧ ಬಂಡಾಯವೆದ್ದವರಿಗೆ ನೆಹರೂ ಅವರ ಪಕ್ಕದಲ್ಲೇ ಇದ್ದ ಮೊರಾರ್ಜಿ ದೇಸಾಯಿ ಅವರ ಬೆಂಬಲವಿತ್ತು. ಪರಿಣಾಮ ಮೊರಾರ್ಜಿ ಬೆಂಬಲಿತ ಬಿ.ಡಿ.ಜತ್ತಿ ಬಣದ ಹೋರಾಟಕ್ಕೆ ಮಣಿದು ನಿಜಲಿಂಗಪ್ಪ ಕೆಳಗಿಳಿಯಬೇಕಾಯಿತು.

೧೯೭೮ ರಲ್ಲಿ ಎರಡನೇ ಬಾರಿ ದೇವರಾಜ ಅರಸರು ಮುಖ್ಯಮಂತ್ರಿಯಾದರಲ್ಲ, ಇದಾದ ಕೆಲವೇ ಕಾಲದಲ್ಲಿ ಅವರ ವಿರುದ್ಧ ಬಂಗಾರಪ್ಪ, ಗುಂಡೂರಾವ್ ಅವರಂತಹ ನಾಯಕರು ತಿರುಗಿ ಬಿದ್ದರು. ದಿನಕಳೆಯುತ್ತಾ ಹೋದಂತೆ ಈ ನಾಯಕರ ಶಕ್ತಿ ಹೆಚ್ಚುತ್ತಾ ಹೋಯಿತು. ಕಾರಣ? ಅವರಿಗೆ ಪ್ರಧಾನಿ ಇಂದಿರಾ ಗಾಂಧಿ ಅವರ ನೇರ ಬೆಂಬಲವಿತ್ತು. ಮತ್ತಿದರ ಪರಿಣಾಮವಾಗಿ ದೇವರಾಜ ಅರಸರು ೧೯೮೦ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.೧೯೮೯ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ಏರಿದವರು ವೀರೇಂದ್ರ ಪಾಟೀಲ್. ಆದರೆ ಮುಂದೆ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಬಂಗಾರಪ್ಪ ಸೇರಿದಂತೆ ಹಲ ಪರ್ಯಾಯ ಶಕ್ತಿ ಕೇಂದ್ರಗಳು ತಲೆ ಎತ್ತಿದವು. ಹೀಗೆ ಅವು ತಲೆ ಎತ್ತಲು ಸ್ವತಃ ಕಾಂಗ್ರೆಸ್ ವರಿಷ್ಠ ರಾಜೀವ್ ಗಾಂಧಿಯವರ ಕೈವಾಡವಿತ್ತು. ಪರಿಣಾಮ, ೧೯೯೦ರಲ್ಲಿ ವೀರೇಂದ್ರ ಪಾಟೀಲ್ ಪದಚ್ಯುತರಾದರು. ಮುಂದೆ ಅವರ ಜಾಗಕ್ಕೆ ಬಂಗಾರಪ್ಪ ಅವರು ಬಂದರೂ ೧೯೯೨ರ ಹೊತ್ತಿಗೆ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಅವರು ಪರ್ಯಾಯ ಶಕ್ತಿ ಕೇಂದ್ರಗಳಾಗಿ ತಲೆ ಎತ್ತಿದರು. ಯಥಾಪ್ರಕಾರ ಹೈಕಮಾಂಡ್ ಮಟ್ಟದಲ್ಲಿ ಅವರಿಗಿದ್ದ ಬೆಂಬಲವೇ ಇದಕ್ಕೆ ಕಾರಣ.

ಪರಿಣಾಮವಾಗಿ ಬಂಗಾರಪ್ಪ ಪದಚ್ಯುತರಾದರು. ೧೯೮೯ರಲ್ಲಿ ಮುಖ್ಯಮಂತ್ರಿಯಾದ ಎಸ್.ಎಂ.ಕೃಷ್ಣ ಅವರಿಗೆಪರ್ಯಾಯ ಶಕ್ತಿ ಕೇಂದ್ರಗಳ ಬಿಸಿ ತಾಗಲಿಲ್ಲವಾದರೂ ಕೊನೆಯ ಹಂತದಲ್ಲಿ ಹೆಚ್.ಕೆ.ಪಾಟೀಲ್ ಅಂತಹ ಪರ್ಯಾಯ ಶಕ್ತಿ ಕೇಂದ್ರವಾಗಲಿಅಂತ ದಿಲ್ಲಿಯ ಕೆಲ ನಾಯಕರು ಬಯಸಿದ್ದರು. ಆದರೆ ಸೋನಿಯಾ ಗಾಂಧಿಯವರ ಸಂಪೂರ್ಣ ಬೆಂಬಲ ಎಸ್.ಎಂ.ಕೃಷ್ಣ ಅವರಿಗಿದ್ದುದರಿಂದ ಪರ್ಯಾಯ ಶಕ್ತಿ ಕೇಂದ್ರವಾಗಿ ತಲೆ ಎತ್ತಲು ಹೆಚ್.ಕೆ.ಪಾಟೀಲರಿಗೆ ಸಾಧ್ಯವಾಗಲಿಲ್ಲ.

ಹೀಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ನಾಯಕರ ವಿರುದ್ಧ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತಲು ಕಾಂಗ್ರೆಸ್ ಹೈಕಮಾಂಡ್ ನೇರ ಕಾರಣ. ಅಂದ ಹಾಗೆ ಇವತ್ತು ರಾಜ್ಯ ಕಾಂಗ್ರೆಸ್‌ನಲ್ಲಿರುವ ಪರಿಸ್ಥಿತಿ ನೋಡಿದರೆ ಪರ್ಯಾಯ ಶಕ್ತಿ ಕೇಂದ್ರದ ಉಗಮಕ್ಕೆ ಅಗತ್ಯವಾದ ವೇದಿಕೆಯಂತೂ ರೆಡಿಯಾಗಿದೆ. ಆದರೆ ಒಂದೇ ಕೊರತೆ ಎಂದರೆ ಇಂತಹ ಪರ್ಯಾಯ ಶಕ್ತಿ ಕೇಂದ್ರಗಳಿಗೆ ಕುಮ್ಮಕ್ಕು ನೀಡುವ ಯಾವ ಶಕ್ತಿಗಳೂ ಹೈಕಮಾಂಡ್ ನಲ್ಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಕಾಂಗ್ರೆಸ್ ಸುಪ್ರಿಮೋಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪೂರ್ಣವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಇದ್ದಾರೆ.

ಏಕೆಂದರೆ ಇವರಿಗೆ ೨೦೨೮ ರಲ್ಲಿ ಪಕ್ಷ ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬರಬೇಕು ಮತ್ತು ಆ ಮೂಲಕ ೨೦೨೯ ರಲ್ಲಿ ದಿಲ್ಲಿ ಗದ್ದುಗೆಯ ವಶಕ್ಕಾಗಿ ಬಿಜೆಪಿ ಎದುರು ನಡೆಯುವ ಮಹಾಸಂಗ್ರಾಮಕ್ಕೆ ಕರ್ನಾಟಕ ಶಸ್ತ್ರಾಗಾರವಾಗಬೇಕು. ಹೀಗೆ ಶಸಾಗಾರವಾಗಬೇಕಿರುವ ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತಲಿ ಅಂತ ಅವರಾದರೂ ಏಕೆ ಬಯಸುತ್ತಾರೆ? ಒಂದು ವೇಳೆ ಇಂತಹ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತಿದರೆ ಹಾನಿಯಾಗುವುದು ಯಾರಿಗೆ? ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಅಂತ ಅವರಿಗೆ ಗೊತ್ತು. ಪರಿಣಾಮ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗ ಸಂಪೂರ್ಣ ಸೇಫ್ ಆಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುವುದು ಕಷ್ಟ.

” ಇವತ್ತು ರಾಜ್ಯ ಕಾಂಗ್ರೆಸ್‌ನಲ್ಲಿರುವ ಪರಿಸ್ಥಿತಿ ನೋಡಿದರೆ ಪರ್ಯಾಯ ಶಕ್ತಿ ಕೇಂದ್ರದ ಉಗಮಕ್ಕೆ ಅಗತ್ಯವಾದ ವೇದಿಕೆಯಂತೂ ರೆಡಿಯಾಗಿದೆ. ಆದರೆ ಒಂದೇ ಕೊರತೆ ಎಂದರೆ ಇಂತಹ ಪರ್ಯಾಯ ಶಕ್ತಿ ಕೇಂದ್ರಗಳಿಗೆ ಕುಮ್ಮಕ್ಕು ನೀಡುವ ಯಾವ ಶಕ್ತಿಗಳೂ ಹೈಕಮಾಂಡ್‌ನಲ್ಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಕಾಂಗ್ರೆಸ್ ಸುಪ್ರಿಮೋ ಗಳಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪೂರ್ಣವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಇದ್ದಾರೆ.”

 

 

Tags:
error: Content is protected !!