ನವದೆಹಲಿ: ಉತ್ತರ ಪ್ರದೇಶದ ರಾಯಲ್‌ಬರೇಲಿ ಹಾಗೂ ಅಮೇಠಿ ಕ್ಷೇತ್ರಕ್ಕೆ ಕೊನೆಗೂ ತಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.
ಇಂದು (ಶುಕ್ರವಾರ, ಮೇ.3) ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಅವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಇದು ರಾಗಾ ಚುನಾವಣಾ ಕಣದಲ್ಲಿ ನಿಲ್ಲುತ್ತಿರುವ ಎರಡನೇ ಕ್ಷೇತ್ರವಾಗಿದೆ. ಇನ್ನು ಈ ಕ್ಷೇತ್ರವನ್ನು ಕಾಂಗ್ರಸ್ ಭದ್ರಕೋಟೆ ಎಂದು ಹೇಳಲಾಗುತ್ತಿದೆ.
ಕಿಶೋರಿಲಾಲ್ ಶರ್ಮಾ ಅವರಿಗೆ ಈ ಬಾರಿ ಕಾಂಗ್ರೆಸ್ ಮಣೆ ಹಾಕಿದ್ದು, ಇವರು ಈ ಬಾರಿ ಅಮೇಠಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಕಿಶೋರಿ ಲಾಲ್ ಅವರು ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆ ಕೇರಳದ ವಯನಾಡ್ ಹಾಗೂ ಅಮೇಠಿಯಿಂದ ಚುನಾವಣೆ ಎದುರಿಸಿದ್ದ ರಾಹುಲ್ ಗಾಂಧಿ ವಯಾಡಿನಲ್ಲಿ ಭರ್ಜರಿಯ ಗೆಲುವು ದಾಖಲಿಸಿದರೇ, ಅಮೇಠಿಯಲ್ಲಿ ಸ್ಮೃತಿ ಇರಾನಿ ಮುಂದೆ ಸೋಲು ಕಂಡಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ರಾಹುಲ್ ಗಾಂಧಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು.
2004ರಿಂದ ರಾಯ್ ಬರೇಲಿಯಲ್ಲಿ ಸ್ಪರ್ಧೆ ಮಾಡುತ್ತಿದ್ದ ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ತಮ್ಮ ತಾಯಿ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೇ ಮಾಡಿದ್ದಾರೆ. ಇನ್ನು ತಮ್ಮ ಕ್ಷೇತ್ರವಾದ ಅಮೇಠಿಯನ್ನು ತಮ್ಮ ಕುಟುಂಬದ ಆಪ್ತ ಶರ್ಮಾ ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ಈ ಎರಡು ಕ್ಷೇತ್ರಗಳಿಗೂ ನಾಮಪತ್ರ ಸಲ್ಲಿಸಲು ಇಂದು (ಶುಕ್ರವಾರ) ಕೊನೆಯ ದಿನವಾಗಿತ್ತು. ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಎರಡು ಕ್ಷೇತ್ರಗಳಿಗೂ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಗಳು.
ಈ ಕ್ಷೇತ್ರಗಳಿಗೆ ಮೇ. 20 ರಂದು ಮತದಾನ ನಡೆಯಲಿದೆ.