ನವದೆಹಲಿ: ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಈ ದೇಶಕ್ಕೆ ಪ್ರತಿವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿಯ ಭಾರತ್ ಮಂಟಪದಲ್ಲಿ ಇಂದು(ಫೆಬ್ರವರಿ.21) ಆಯೋಜಿಸಿದ್ದ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ ಕಾನ್‌ಕ್ಲೈವ್‌ನ ಮೊದಲ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರೀಕರ ಅಭಿವೃದ್ಧಿ ಅಗತ್ಯ. ಪ್ರಜೆಗಳಿಂದ ಜಗತ್ತು ನಿರ್ಮಾಣವಾಗುತ್ತದೆ. ಅಂತೆಯೇ ವೈಯಕ್ತಿಕ ಅಭಿವೃದ್ಧಿಯ ಮೂಲಕ ರಾಷ್ಟ್ರದ ಯಾವುದೇ ಎತ್ತರವನ್ನು ಸಾಧಿಸಬಹುದು. ಉತ್ತಮ ನಾಯಕರ ಅಭಿವೃದ್ಧಿ ಅಗತ್ಯವಾಗಿದೆ. ಹೀಗಾಗಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ ಸ್ಥಾಪನೆಯು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಒಂದು ಪ್ರಮುಖ ಮತ್ತು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.
ಭಾರತವನ್ನು ಸ್ವಾಮಿ ವಿವೇಕಾನಂದರು ಗುಲಾಮಗಿರಿಯಿಂದ ಹೊರತರಲು ಬಯಸಿದ್ದರರು. ಅವರಿಗೆ 100 ನಾಯಕರು ಇದ್ದರೆ ಸಾಕು, ಈ ಭಾರತಕ್ಕೆ ಸ್ವಾತಂತ್ರ್ಯ ನೀಡುವುದಲ್ಲದೇ, ಜಗತ್ತಿನಲ್ಲೇ ನಂಬರ್ ಒನ್ ದೇಶವನ್ನಾಗಿ ಮಾಡಬಹುದು ಎಂದು ನಂಬಿದ್ದರು. ನಾವೆಲ್ಲರೂ ಈ ಮಂತ್ರದೊಂದಿಗೆ ಮುಂದುವಿಯಬೇಕು ಎಂದರು.
ಇನ್ನು ಮುಂದಿನ ದಿನಗಳಲ್ಲಿ ಭಾತದ ಪ್ರಭಾವವೂ ಎಲ್ಲಾ ವಲಯಗಳಲ್ಲಿ ಅನೇಕ ಪಟ್ಟು ಅಧಿಕವಾಗುತ್ತದೆ. ಒಂದು ರೀತಿಯಲ್ಲಿ ಭಾರತದ ಸಂಪೂರ್ಣ ದೃಷ್ಟಿಕೋನ ಹಾಗೂ ವಿಷ್ಯವು ಬಲವಾದ ನಾಯಕತ್ವ ಪೀಳಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ನಾವು ಜಾಗತಿಕ ಚಿಂತನೆ ಮತ್ತು ಸ್ಥಳೀಯ ಪಾಲನೆಯೊಂದಿಗೆ ಮುಂದುವರಿಯಬೇಕು ಎಂದು ತಿಳಿಸಿದರು.