ಭೋಪಾಲ್: ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಮಧ್ಯಪ್ರದೇಶದಿಂದ ಕೆಲ ಹುಲಿಗಳನ್ನು ಒಡಿಶಾ, ಛತ್ತೀಸ್‌ಗಢ ಹಾಗೂ ರಾಜಸ್ಥಾನಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಈ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಹುಲಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಒಡಿಶಾ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲೂ ಹುಲಿಗಳ ಸಂತತಿ ಹರಡಲು ಈ ಯೋಜನೆ ಸಹಾಯವಾಗಲಿದೆ.
ವಿಷಯ ತಿಳಿಯುತ್ತಿದ್ದಂತೆ ಸಂತಸಗೊಂಡಿರುವ ಪ್ರಾಣಿಪ್ರಿಯರು ದೇಶದ ಉದ್ದಗಲಕ್ಕೂ ಹುಲಿಗಳು ಸಂಚರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೂರು ರಾಜ್ಯಗಳಿಗೂ ತಲಾ ಮೂರು ಗಂಡು ಹುಲಿ ಹಾಗೂ ಒಂದು ಹೆಣ್ಣು ಹುಲಿಯನ್ನು ಕಳುಹಿಸಲು ಈಗಾಗಲೇ ಚಿಂತನೆ ನಡೆಸಲಾಗಿದೆ. ಅಲ್ಲಿ ಹುಲಿಗಳಿಗೆ ಹೆಚ್ಚಿನ ಕಾಳಜಿ ವಹಿಸುವಂತೆ ಆಯಾಯ ರಾಜ್ಯಗಳಿಗೆ ಖಡಕ್ ಸೂಚನೆ ನೀಡಲಾಗಿದೆ.
ಪ್ರಸ್ತುತ ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಭಾರತದಲ್ಲೇ ಅತೀ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಇನ್ನೂ ಕರ್ನಾಟಕದಲ್ಲಿ 400 ಕ್ಕೂ ಹೆಚ್ಚು ಹುಲಿಗಳಿವೆ ಎಂಬ ಮಾಹಿತಿ ಹೊರಬಿದ್ದಿದೆ.





