ನವದೆಹಲಿ: ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ಕೊಡಬಹುದು. ಸಚಿವರಿಗೆ ಅಭಿವೃದ್ಧಿ ಕೆಲಸ ಮಾಡಬೇಕು ಎಂಬ ಮನಸ್ಸಿಲ್ಲ. ಯಾವ ಸಚಿವರು ಕೂಡ ವಿಧಾನಸೌಧಕ್ಕೂ ಸರಿಯಾಗಿ ಹೋಗುತ್ತಿಲ್ಲ. ಯಾವಾಗ ಸಿಎಂ ರಾಜೀನಾಮೆ ಕೊಡುತ್ತಾರೋ, ಸಿದ್ದರಾಮಯ್ಯ ಪರ ಮಾತನಾಡಲು ದೆಹಲಿಗೆ ಯಾವಾಗ ಹೋಗಬೇಕು ಎಂಬ ಆತಂಕದಲ್ಲಿದ್ದಾರೆ ಎಂದರು.
ಇವತ್ತಲ್ಲ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಹೈಕೋರ್ಟ್ ತೀರ್ಪು ಬಂದ ಬಳಿಕವಾದರೂ ಅವರು ರಾಜೀನಾಮೆ ನೀಡಲಿದ್ದಾರೆ. ಇವತ್ತಲ್ಲ ನಾಳೆ ಆ 14 ನಿವೇಶನಗಳು ಮುಡಾ ಪಾಲಾಗಿ ಬಡವರಿಗೆ ಸಿಗಲಿದೆ. ಈ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಒಂದಾದರೂ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಯಾವುದೇ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿಲ್ಲ ಎಂದು ಟೀಕೆ ಮಾಡಿದರು.
ಇನ್ನು ಗ್ಯಾರಂಟಿ ಯೋಜನೆ ಬಗ್ಗೆ ಕಿಡಿಕಾರಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬೊಕ್ಕಸ ಖಾಲಿಯಾಗಿದೆ. ಕೆಎಸ್‌ಆರ್‌ಟಿಸಿಗೆ 4500 ಕೋಟಿ ರೂ ಕೊಡಬೇಕಿದೆ. ಇನ್ನೂ ಮೂರ್ನಾಲ್ಕು ತಿಂಗಳು ಹೀಗೇಯೇ ಮುಂದುವರಿದರೆ ಕೆಎಸ್‌ಆರ್‌ಟಿಸಿ ಬಾಗಿಲು ಮುಚ್ಚಲಿದೆ. ಸಂಬಳ ಕೊಡಲು ದುಡ್ಡಿಲ್ಲ ಎಂದು ಕಿಡಿಕಾರಿದರು.