Mysore
23
overcast clouds
Light
Dark

ಯೋಧರ ಶವಪೆಟ್ಟಿಗೆ ಹೊತ್ತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್​​ನಲ್ಲಿ ಮಂಗಳವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟ ಐಟಿಬಿಪಿ ಯೋಧರ ಮೃತದೇಹವನ್ನು ಶ್ರೀನಗರಕ್ಕೆ ತರಲಾಗಿದೆ. ಡಿಪಿಎಲ್ ಶ್ರೀನಗರದಲ್ಲಿ ಬುಧವಾರ ಮೃತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವಿದ್ದು ಯೋಧರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆ ಹೊತ್ತು ತರುವಾಗ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೆಗಲು ನೀಡಿದ್ದಾರೆ.

ಪಹಲ್ಗಾಮ್​​ನಲ್ಲಿ ನಿಯಂತ್ರಣ ತಪ್ಪಿದ ಬಸ್ ನದಿ ತಳಭಾಗಕ್ಕೆ ಉರುಳಿ ಬಿದ್ದಿದ್ದು 7 ಯೋಧರು ನಿನ್ನೆ ಮೃತಪಟ್ಟಿದ್ದರು.ಬಸ್​​ನಲ್ಲಿದ್ದ ಏಳು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರ ಗಾಯಗೊಂಡ 9 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಮೇಲೆತ್ತಲಾಗಿದ್ದು ಅವರು ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಟಿಬಿಪಿ ಪ್ರಕಾರ, ಒಟ್ಟು 32 ಗಾಯಾಳುಗಳನ್ನು ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ. 37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜೆ-ಕೆ ಪೊಲೀಸರನ್ನು ಹೊತ್ತ ಬಸ್ ಚಂದನ್ವಾರಿಯಿಂದ ಪಹಲ್ಗಾಮ್‌ಗೆ ತೆರಳುತ್ತಿದ್ದಾಗ ಅದರ ಬ್ರೇಕ್ ಫೇಲ್ ಆಗಿ ಆಳವಾದ ಕಮರಿಗೆ ಉರುಳಿದ ನಂತರ  ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.  ಅಪಘಾತದ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೃತ ಐಟಿಬಿಪಿ ಸಿಬ್ಬಂದಿಯ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

“ನಮ್ಮ ವೀರ ಐಟಿಬಿಪಿ ಸಿಬ್ಬಂದಿಯನ್ನು ಕಳೆದುಕೊಂಡಿರುವ ಚಂದನ್ವಾರಿ ಬಳಿ ಬಸ್ ಅಪಘಾತದಿಂದ ತೀವ್ರ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಗಾಯಗೊಂಡ ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ” ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದುರಂತ ಘಟನೆಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದು,  ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವಿಟರ್‌ನಲ್ಲಿ ಹಾರೈಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ , ಪಹಲ್ಗಾಮ್‌ನಲ್ಲಿ ಐಟಿಬಿಟಿ  ಮತ್ತು ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತದ ಬಗ್ಗೆ ತಿಳಿದು ದುಃಖವಾಗಿದೆ.  ದುಃಖಿತ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಪಘಾತದಲ್ಲಿ 30 ಮಂದಿ ಗಾಯಗೊಂಡಿದ್ದಾರೆ ಎಂದು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯ ಡಾ.ಸೈಯದ್ ತಾರಿಕ್ ತಿಳಿಸಿದ್ದಾರೆ.

ಪಹಲ್ಗಾಮ್ ಪ್ರದೇಶದ ಫ್ರಿಸ್ಲಾನ್​ನಲ್ಲಿ ನಿನ್ನೆ  ಈ ದುರ್ಘಟನೆ ನಡೆದಿದೆ.  ಅಮರನಾಥ ಯಾತ್ರೆಗಾಗಿ ಈ ಪ್ರದೇಶದಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು. ನಾವು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ನಿರ್ವಹಣೆಯ ತಂಡಗಳನ್ನು ಸ್ಥಳಕ್ಕೆ ಧಾವಿಸಲಾಗಿದೆ” ಎಂದು ಐಟಿಬಿಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮರನಾಥ ಯಾತ್ರೆ ಜೂನ್ 29 ರಂದು ಜಮ್ಮುವಿನಿಂದ ಸೇನೆ ಮತ್ತು ಸ್ಥಳೀಯ ಪೊಲೀಸರೊಂದಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಾಡಿದ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ